ಅಮೆರಿಕ, ಚೀನಾ ಆರ್ಥಿಕತೆಯ ಸಂಪೂರ್ಣ ಬೇರ್ಪಡಿಕೆ ಸಾಧ್ಯ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ವಾಶಿಂಗ್ಟನ್, ಜೂ. 19: ಆಳವಾಗಿ ಬೆಸೆದುಕೊಂಡಿರುವ ಅಮೆರಿಕ ಮತ್ತು ಚೀನಾಗಳ ಆರ್ಥಿಕತೆಗಳನ್ನು ಸಂಪೂರ್ಣವಾಗಿ ಬೇರ್ಪಡಿಸುವುದು ಅಮೆರಿಕದ ಸಂಭಾವ್ಯ ನೀತಿಯಾಗಬಹುದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಎಚ್ಚರಿಸಿದ್ದಾರೆ.
‘‘ಚೀನಾದೊಂದಿಗೆ ಸಂಪೂರ್ಣವಾಗಿ ಬೇರ್ಪಡುವ ನೀತಿಯನ್ನು ಅನುಸರಿಸುವ ಆಯ್ಕೆಯನ್ನು ಖಂಡಿತವಾಗಿಯೂ ಅಮೆರಿಕ ಹೊಂದಿದೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್‌ರ ಹೇಳಿಕೆಗಳಿಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಮರವನ್ನು ಕೊನೆಗೊಳಿಸುವುದಕ್ಕಾಗಿ ಲೈಟ್‌ಹೈಝರ್ ನೇತೃತ್ವದ ತಂಡವು ಚೀನಾದೊಂದಿಗೆ ಸಂಧಾನದಲ್ಲಿ ತೊಡಗಿದೆ.
ವ್ಯಾಪಾರ ಸಮರವನ್ನು ಕೊನೆಗೊಳಿಸುವ ಉದ್ದೇಶದ ಒಂದನೇ ಹಂತದ ಒಪ್ಪಂದದ ಶರತ್ತುಗಳಿಗೆ ಚೀನಾ ಈವರೆಗೆ ಬದ್ಧವಾಗಿದೆ, ಆದರೆ ಎರಡು ದೇಶಗಳ ನಡುವಿನ ವ್ಯಾಪಾರ ಬಾಂಧವ್ಯವನ್ನು ಬೇರ್ಪಡಿಸುವುದು ಈಗ ಅಸಂಭವವಾಗಿದೆ ಎಂದು ಬುಧವಾರ ಸಂಸತ್ತು ಕಾಂಗ್ರೆಸ್‌ನ ಸ್ಥಾಯಿ ಸಮಿತಿಯೊಂದರ ಮುಂದೆ ಹೇಳಿಕೆ ನೀಡಿದ ಲೈಟ್‌ಹೈಝರ್ ಹೇಳಿದ್ದರು.
‘‘ವ್ಯಾಪಾರ ಸಂಬಂಧವನ್ನು ಬೇರ್ಪಡಿಸುವುದು ಕೆಲವು ವರ್ಷಗಳ ಹಿಂದೆ ಆಯ್ಕೆಯಾಗಿತ್ತು. ಆದರೆ ಈ ಹಂತದಲ್ಲಿ ಅದೊಂದು ಮೌಲಿಕ ಆಯ್ಕೆಯೆಂದು ನನಗೆ ಅನಿಸುತ್ತಿಲ್ಲ’’ ಎಂದು ಅವರು ನುಡಿದಿದ್ದರು.