ಆದ್ಯತಾ ವ್ಯಾಪಾರ ದೇಶಗಳ ಪಟ್ಟಿಗೆ ಭಾರತವನ್ನು ಮತ್ತೆ ಸೇರಿಸಲು ಸಿದ್ಧ

Update: 2020-06-19 16:52 GMT

ವಾಶಿಂಗ್ಟನ್, ಜೂ. 19: ಭಾರತದಿಂದ ಪೂರಕವಾದ ಪ್ರಸ್ತಾವ ಬಂದರೆ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್ (ಜಿಎಸ್‌ಪಿ) ಕಾರ್ಯಕ್ರಮದನ್ವಯ ಭಾರತವನ್ನು ಆದ್ಯತಾ ವ್ಯಾಪಾರ ದೇಶಗಳ ಪಟ್ಟಿಗೆ ಮತ್ತೆ ಸೇರಿಸುವ ಬಗ್ಗೆ ಅಮೆರಿಕ ಪರಿಶೀಲಿಸುತ್ತಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಝರ್ ಹೇಳಿದ್ದಾರೆ.

‘‘ನಾವು ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿದ್ದೇವೆ. ನಾವು ಅವರ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಹಿಂದಕ್ಕೆ ಪಡೆದುಕೊಂಡಿದ್ದೇವೆ. ಆದರೆ, ಅವರಿಂದ ಪೂರಕವಾದ ಪ್ರಸ್ತಾವ ಬಂದರೆ ಅವರಿಗೆ ಮತ್ತೆ ವ್ಯಾಪಾರದಲ್ಲಿ ಆದ್ಯತೆ ನೀಡುವ ಬಗ್ಗೆ ಪರಿಶೀಲಿಸುತ್ತೇವೆ’’ ಎಂದು ಸೆನೆಟ್ ಹಣಕಾಸು ಸಮಿತಿಯ ಮುಂದೆ ವಿವರಣೆ ನೀಡಿದ ಅವರು ಹೇಳಿದರು.

‘‘ಈವರೆಗೆ ನಾವು ಈ ವಿಷಯದಲ್ಲಿ ಮುಂದುವರಿದಿಲ್ಲ. ಆದರೆ, ಈಗ ಈ ವಿಷಯದಲ್ಲಿ ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿದ್ದೇವೆ’’ ಎಂದು ವಾಶಿಂಗ್ಟನ್ ರಾಜ್ಯದ ಸೆನೆಟರ್ ಮರಿಯಾ ಕ್ಯಾಂಟ್‌ವೆಲ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ತನ್ನ ರಾಜ್ಯದಿಂದ ಆಮದು ಮಾಡಿಕೊಳ್ಳುವ ಸೇಬು ಹಣ್ಣಿಗೆ ಭಾರತ ವಿಧಿಸಿರುವ ಅಧಿಕ ಆಮದು ತೆರಿಗೆಯ ಬಗ್ಗೆ ಕ್ಯಾಂಟ್‌ವೆಲ್ ನಿರಾಶೆ ವ್ಯಕ್ತಪಡಿಸಿದರು.

‘‘ಭಾರತ ಸೇಬು ಹಣ್ಣಿನ ಮೇಲೆ 70 ಶೇಕಡ ಆಮದು ತೆರಿಗೆ ವಿಧಿಸುತ್ತಿದೆ. ಹಾಗಾಗಿ, ಸಹಜವಾಗಿಯೇ ಅದು ದುಬಾರಿ ವಸ್ತುವಾಗಿದೆ. ಆ ತೆರಿಗೆಯನ್ನು ಸೇಬು ಹಣ್ಣಿನಿಂದ ತೆಗೆಯಲು ನಾವು ಏನು ಮಾಡಬಹುದು’’ ಎಂದು ಅವರು ಕೇಳಿದರು.

‘‘ನಿಮ್ಮ ಮಾತಿಗೆ ನಮ್ಮ ಸಹಮತವಿದೆ. ಅವರ ಸಾಮಾನ್ಯ ತೆರಿಗೆಯೇ ಅಧಿಕವಾಗಿದೆ ಹಾಗೂ ಪ್ರತೀಕಾರಾತ್ಮಕ ತೆರಿಗೆಯಂತೂ ಇನ್ನೂ ಕೆಟ್ಟದಾಗಿದೆ ಎನ್ನುವುದನ್ನೂ ನಾವು ಒಪ್ಪುತ್ತೇವೆ’’ ಎಂದು ಲೈಟ್‌ಹೈಝರ್ ನುಡಿದರು.

2019 ಜೂನ್ 5ರಿಂದ ಭಾರತದ ಆದ್ಯತಾ ವ್ಯಾಪಾರ ಸ್ಥಾನಮಾನವನ್ನು ಅಮೆರಿಕ ಹಿಂದಕ್ಕೆ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News