ಬೋಲ್ಟನ್ ದೇಶದ್ರೋಹಿ; ಅವರು ಹೇಳಿರುವುದು ಸಾರಾಸಗಟು ಸುಳ್ಳು: ಪಾಂಪಿಯೊ
ವಾಶಿಂಗ್ಟನ್, ಜೂ. 19: ತನ್ನ ನೂತನ ಪುಸ್ತಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಸ್ಫೋಟಕ ವಿಚಾರಗಳನ್ನು ಬರೆದಿರುವುದಕ್ಕಾಗಿ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ವಿರುದ್ಧ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಗುರುವಾರ ಹರಿಹಾಯ್ದಿದ್ದಾರೆ ಹಾಗೂ ಅವರನ್ನು ‘ದೇಶದ್ರೋಹಿ’ ಎಂಬುದಾಗಿ ಬಣ್ಣಿಸಿದ್ದಾರೆ.
‘‘ಜಾನ್ ಬೋಲ್ಟನ್ ಸುಳ್ಳುಗಳನ್ನು ಹರಡುತ್ತಿದ್ದಾರೆ, ಅವರು ಅರ್ಧಸತ್ಯಗಳು ಮತ್ತು ಸಾರಾಸಗಟು ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ’’ ಎಂದು ಹೇಳಿಕೆಯೊಂದರಲ್ಲಿ ಪಾಂಪಿಯೊ ಅಭಿಪ್ರಾಯಪಟ್ಟಿದ್ದಾರೆ.
‘‘ಜಾನ್ ಬೋಲ್ಟನ್ ಅಂತಿಮವಾಗಿ ದೇಶದ್ರೋಹಿಯಾಗಿ ಮಾರ್ಪಟ್ಟಿರುವುದು ಬೇಸರದ ಸಂಗತಿ ಹಾಗೂ ಅಪಾಯಕಾರಿಯಾಗಿದೆ. ಜನರ ಪವಿತ್ರ ನಂಬಿಕೆಯನ್ನು ಉಲ್ಲಂಘಿಸುವ ಮೂಲಕ ಅವರು ಅಮೆರಿಕಕ್ಕೆ ಹಾನಿ ಮಾಡಿದ್ದಾರೆ’’ ಎಂದರು.
‘‘ಜಗತ್ತಿನಾದ್ಯಂತವಿರುವ ನಮ್ಮ ಸ್ನೇಹಿತರಿಗೆ: ಅಧ್ಯಕ್ಷ ಟ್ರಂಪ್‌ರ ಅಮೆರಿಕವು ಜಗತ್ತಿನಲ್ಲಿ ಒಳ್ಳೆಯದಕ್ಕಾಗಿ ಇರುವ ಶಕ್ತಿಯಾಗಿದೆ’’ ಎಂದು ವಿದೇಶ ಕಾರ್ಯದರ್ಶಿ ನುಡಿದರು.
ಬೋಲ್ಟನ್ ಬರೆದ ‘ದ ರೂಮ್ ವೇರ್ ಇಟ್ ಹ್ಯಾಪನ್ಡ್’ ಪುಸ್ತಕವನ್ನು ನಾನಿನ್ನೂ ಓದಿಲ್ಲ ಎಂದು ಪಾಂಪಿಯೊ ಹೇಳಿದರು. ಜೂನ್ 23ರಂದು ಬಿಡುಗಡೆಯಾಗಲು ನಿಗದಿಯಾಗಿರುವ ಈ ಪುಸ್ತಕವನ್ನು ನಿಷೇಧಿಸಲು ಟ್ರಂಪ್ ಆಡಳಿತ ಪ್ರಯತ್ನಿಸುತ್ತಿದೆ.
ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಾಯ ಮಾಡಿ ಎಂಬುದಾಗಿ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ದುಂಬಾಲು ಬಿದ್ದಿದ್ದರು ಎಂಬ ಸ್ಫೋಟಕ ಮಾಹಿತಿ ಪುಸ್ತಕದಲ್ಲಿದೆ.
ಪಾಂಪಿಯೊ ಸಾರ್ವಜನಿಕವಾಗಿ ಟ್ರಂಪ್ ಜೊತೆ ಜಗಳ ಮಾಡದಿದ್ದರೂ, ಖಾಸಗಿಯಾಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬುದಾಗಿ ಬೋಲ್ಟನ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಅವರ ಪುಸ್ತಕದ ಕೆಲವು ತುಣುಕುಗಳನ್ನು ಅಮೆರಿಕದ ಕೆಲವು ಪ್ರಮುಖ ಪತ್ರಿಕೆಗಳು ಗುರುವಾರ ಪ್ರಕಟಿಸಿವೆ.