ಶರ್ಜಿಲ್ ಇಮಾಮ್ ಪ್ರಕರಣ: ವಿಚಾರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

Update: 2020-06-19 17:57 GMT

 ಹೊಸದಿಲ್ಲಿ,ಜೂ.19: ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ ವಿದ್ಯಾರ್ಥಿ ಶರ್ಜಿಲ್ ಇಮಾಮ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಿಸಲಾದ ದೇಶದ್ರೋಹದ ಪ್ರಕರಣಗಳಿಗೆ ತಡೆಯಾಜ್ಞೆ ವಿಧಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ತನ್ನ ವಿರುದ್ಧ ದೇಶದ ವಿವಿಧೆಡೆ ದಾಖಲಿಸಲಾಗಿರುವ ಎಫ್‌ಐಆರ್‌ಗಳನ್ನು ಕೈಬಿಡಬೇಕೆಂದು ಕೋರಿ ಇಮಾಮ್ ಅವರು ಅರ್ಜಿ ಸಲ್ಲಿಸಿದ್ದರು.

 ಶರ್ಜಿಲ್ ಅರ್ಜಿಯ ವಿರುದ್ಧ ದಿಲ್ಲಿ ಹಾಗೂ ಉತ್ತರಪ್ರದೇಶ ಸರಕಾರಗಳು ಮಾತ್ರ ಅಫಿಡವಿತ್ ಸಲ್ಲಿಸಿವೆ. ಆದರೆ ಅಸ್ಸಾಂ, ಮಣಿಪುರ ಹಾಗೂ ಅರುಣಾಚಲಪ್ರದೇಶ ರಾಜ್ಯಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಇಮಾಮ್‌ರ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು ಹಾಗೂ ಇಮಾಮ್ ಅರ್ಜಿಗೆ ಉತ್ತರವಾಗಿ ಕೌಂಟರ್ ಅಫಿಡವಿತ್‌ಗಳನ್ನು ಸಲ್ಲಿಸಲು ಉಳಿದ ಮೂರು ರಾಜ್ಯಗಳಿಗೆ ಇನೂ ಎರಡು ವಾರಗಳ ಕಾಲಾವಕಾಶ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿ ಇತರ ರಾಜ್ಯಗಳ ಉತ್ತರಗಳನ್ನು ಪರಿಶೀಲಿಸದೆ ಮಧ್ಯಂತರ ಆದೇಶವನ್ನು ನೀಡಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಇಮಾಮ್ ಪರ ವಕೀಲ ಸಿದ್ಧಾರ್ಥ್ ದವೆ ಅವರಿಗೆ ತಿಳಿಸಿತು.

ಪ್ರಕರಣದ ಮುಂದಿನ ಆಲಿಕೆಯನ್ನು ನ್ಯಾಯಪೀಠವು ಮೂರ ವಾರಗಳವರೆಗೆ ಮುಂದೂಡಿತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಮಿಯಾ ಮಿಲ್ಲಿಯಾ ವಿವಿ ಆವರಣದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆಂಬ ಆರೋಪದಲ್ಲಿ ಇಮಾಮ್‌ರನ್ನು ದಿಲ್ಲಿ ಪೊಲೀಸರು ಬಿಹಾರದ ಜೆಹಾನಾಬಾದ್‌ನಲ್ಲಿ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News