ಚೀನಾ ಅತಿಕ್ರಮಣ ನಡೆಸಿಲ್ಲವೆಂಬ ಪ್ರಧಾನಿ ಹೇಳಿಕೆಗೆ ವಿಪಕ್ಷ ರಕ್ಷಣಾ ತಜ್ಞರ ಖಂಡನೆ: ಪ್ರಶ್ನೆಗಳ ಸುರಿಮಳೆ

Update: 2020-06-20 16:19 GMT

ಹೊಸದಿಲ್ಲಿ, ಜೂ.20: ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಜೂ.15ರಂದು ಚೀನಿ ಸೈನಿಕರೊಂದಿಗೆ ಘರ್ಷಣೆ ನಡೆದ ಸಂದರ್ಭ ಚೀನಿ ಸೈನಿಕರು ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿಲ್ಲ ಹಾಗೂ ಭಾರತೀಯ ಸೇನೆಯ ಯಾವುದೇ ಠಾಣೆಯನ್ನು ವಶಪಡಿಸಿಕೊಂಡಿಲ್ಲವೆಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪ್ರತಿಪಕ್ಷ ನಾಯಕರು ಹಾಗೂ ಭಾರತದ ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ.

 ಗಲ್ವಾನ್ ಕಣಿವೆಯಲ್ಲಿ ಚೀನಿ ಪಡೆಗಳು ಹಾಗೂ ಭಾರತೀಯ ಸೇನಾಪಡೆಗಳ ನಡುವೆ ನಡೆದ ಘರ್ಷಣೆಯ ಕುರಿತಾಗಿ ಚರ್ಚಿಸಲು ಶುಕ್ರವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ , ‘‘ನಮ್ಮ ಭೂಪ್ರದೇಶದೊಳಗೆ ಯಾರೂ ಅತಿಕ್ರಮಣ ನಡೆಸಿಲ್ಲ ಅಥವಾ ಭಾರತೀಯ ಸೇನೆಯ ಯಾವುದೇ ಠಾಣೆಯನ್ನು ವಶಪಡಿಸಿಕೊಂಡಿಲ್ಲ’’ ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿಯವರು, ಅತಿಕ್ರಮಣ ನಡೆಸಿದ ಚೀನಾಗೆ ಭಾರತೀಯ ಭೂಪ್ರದೇಶವನ್ನು ಒಪ್ಪಿಸಿಬಿಟ್ಟಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ. ಒಂದು ವೇಳೆ ಘರ್ಷಣೆ ನಡೆದ ಜಾಗವು ಚೀನಿಯರಿಗೆ ಸೇರಿದ್ದಾಗಿದ್ದರೆ, “ಯಾಕೆ ನಮ್ಮ ಸೈನಿಕರು ಸಾವನ್ನಪ್ಪಿದರು ಮತ್ತು ಎಲ್ಲಿ ಅವರು ಹತ್ಯೆಯಾದರು?” ಎಂದು ರಾಹುಲ್ ಪ್ರಶ್ನಿಸಿದರು.

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕೂಡಾ ಪ್ರಧಾನಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ. ಒಂದು ವೇಳೆ ಚೀನಿ ಸೈನಿಕರು ಅತಿಕ್ರಮಣ ನಡೆಸಿಲ್ಲವೆಂದಾದರೆ ಜೂನ್ 6ರಂದು ನಡೆದ ಸಭೆಯಲ್ಲಿ ಭಾರತ ಹಾಗೂ ಚೀನಾದ ಹಿರಿಯ ಕಮಾಂಡರ್‌ಗಳು ಹವಾಮಾನದ ಬಗ್ಗೆ ಚರ್ಚಿಸಿದ್ದಾರೆಯೇ ಎಂದವರು ವ್ಯಂಗ್ಯವಾಡಿದರು. ‘

‘ಒಳನುಸುಳುವಿಕೆ ನಡೆದಿಲ್ಲ ಹಾಗೂ ಎಲ್‌ಎಸಿ ಉಲ್ಲಂಘನೆಯಾಗಿಲ್ಲವೆಂದಾದರೆ, ಎರಡೂ ಸೇನೆಗಳ ವಾಪಾಸಾತಿಯ ಬಗ್ಗೆ ಯಾಕೆ ಇಷ್ಟೊಂದು ಮಾತುಕತೆಗಳು ನಡೆದಿವೆ ?’’ ಎಂದು ಚಿದಂಬರಂ ಪ್ರಶ್ನಿಸಿದರು. ಗಲ್ವಾನ್ ಸಂಘರ್ಷದ ವಿಷಯದಲ್ಲಿ ಪ್ರಧಾನಿ, ಚೀನಾಗೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಎಂದವರು ಹೇಳಿದರು. ಮೋದಿಯವರ ಈ ಹೇಳಿಕೆ, ಪ್ರತಿಯೊಬ್ಬರನ್ನು ಗಲಿಬಿಲಿಗೆ ಸಿಲುಕಿಸಿದೆ ಎಂದರು.

  ಭಾರತೀಯ ಭೂಪ್ರದೇಶದೊಳಗೆ ಯಾರೂ ಕೂಡಾ ಒಳನುಸುಳಿಲ್ಲವೆಂಬ ಮೋದಿಯವರ ಹೇಳಿಕೆಯನ್ನು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡಾ ಪ್ರಶ್ನಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಏನೂ ನಡೆದಿಲ್ಲವೆಂದಾದರೆ ಉದ್ವಿಗ್ನತೆ ಶಮನಗೊಳಿಸುವ ದೌತ್ಯವನ್ನು ನಡೆಸುವ ಅಗತ್ಯವೇನಿದೆ?. ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಯಾಕೆ ಬೇಕು ಹಾಗೂ ಯಾಕೆ ಸೈನಿಕರು ಸಾವನ್ನಪ್ಪಿದರು ಎಂದು ಮಹುವಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

 ಭಾರತ ಹಾಗೂ ಚೀನಾದ ನಡುವೆ ಸಂಘರ್ಷ ಇಲ್ಲವಾದರೆ ಯಾಕೆ ನಮ್ಮ ವೀರ ಯೋಧರು ಹುತಾತ್ಮರಾದರು ?, ಸರ್ವ ಪಕ್ಷ ಯಾಕೆ ಬೇಕಿತ್ತು ಎಂದು ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಹೇಳಿದ್ದಾರೆ.

ಗಲ್ವಾನ್ ಕಣಿವೆಯ ಮೇಲಿನ ತನ್ನ ಹಕ್ಕನ್ನು ಭಾರತ ಕೈಬಿಟ್ಟಿದೆಯೇ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.

‘‘ಚೀನಾ ನಮ್ಮ ಭೂಪ್ರದೇಶದ ಮೇಲೆ ಅತಿಕ್ರಮಣ ನಡೆಸಿಲ್ಲವಾದರೆ, ಚೀನಾದ ಜೊತೆ ನಾವು ಏನನ್ನು ಚರ್ಚಿಸುತ್ತಿದ್ದೇವೆ?’’ ಎಂದವರು ಕೇಳಿದ್ದಾರೆ. ಶುಕ್ರವಾರ ನಡೆದ ಸರ್ವಪಕ್ಷ ಸಭೆಗೆ ಆಮ್ ಆದ್ಮಿ ಪಕ್ಷಕ್ಕೆ ಆಹ್ವಾನವಿರಲಿಲ್ಲ. ಸಮಗ್ರ ಗಲ್ವಾನ್ ‌ಕಣಿವೆಯ ಮೇಲೆ ಚೀನಾವು ಹಕ್ಕುಸ್ಥಾಪಿಸುತ್ತಿರುವ ಬಗ್ಗೆ ಕೇಂದ್ರ ಸರಕಾರವು ಪ್ರತಿಕ್ರಿಯಿಸಬೇಕೆಂದು ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಆಗ್ರಹಿಸಿದ್ದಾರೆ. ಗಲ್ವಾನ್ ಕಣಿವೆ ಪ್ರದೇಶವು, ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ಚೀನಾದ ಭಾಗದಲ್ಲಿದೆಯೆಂದು ಬೀಜಿಂಗ್ ನೀಡಿದ್ದ ಹೇಳಿಕೆಯನ್ನು ಪ್ರಸ್ತಾವಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಗಲ್ವಾನ್ ಕಣಿವೆಯನ್ನು ನಾವು ಬಿಟ್ಟುಕೊಟ್ಟಿದ್ದೇವೆಯೇ ಅಥವಾ ಅಲ್ಲಿಂದ ಚೀನಿ ಸೇನೆಯನ್ನು ಹೊರಗಟ್ಟಿದ್ದೇವೆ ಎಂಬುದು ದೇಶಕ್ಕೆ ಗೊತ್ತಾಗಬೇಕಿದೆ ಎಂದರು.

  ಎಲ್‌ಎಸಿಯ ಭಾರತಕ್ಕೆ ಸೇರಿದ ಭಾಗದಲ್ಲಿ ರಚನೆಯೊಂದನ್ನು ನಿರ್ಮಿಸಲು ಚೀನಿಯರು ಮುಂದಾದಾಗ ಘರ್ಷಣೆ ಭುಗಿಲೆದ್ದಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಚೀನಾದ ವಿದೇಶ ಸಚಿವ ವಾಂಗ್ ಯಿಗೆ ತಿಳಿಸಿದ ಎರಡು ದಿನಗಳ ಬಳಿಕ ಮೋದಿ ಈ ವಿವರಣೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

 ಇತ್ತ ಭಾರತದ ಹಲವಾರು ಹಿರಿಯ ರಕ್ಷಣಾ ಪರಿಣಿತರೂ ಕೂಡಾ ಮೋದಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಮೋದಿ ನೀಡಿದ ಹೇಳಿಕೆಯು ತಪ್ಪು ಪರಾಮರ್ಶೆಯಾಗಿದೆ ಹಾಗೂ ನಿಖರತೆಯಿಂದ ಕೂಡಿಲ್ಲವೆಂದು ಮಾಜಿ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ತಿಳಿಸಿದ್ದಾರೆ. ಮೋದಿ ಹೇಳಿಕೆಯು ಚೀನಾದ ಅತಿಕ್ರಮಣವನ್ನು ಒಪ್ಪಿಕೊಂಡಿದೆ ಎಂದವರು ಹೇಳಿದ್ದಾರೆ. ಅತಿಕ್ರಮಣ ನಡೆದಿಲ್ಲವೆಂದಾದರೆ ನಮ್ಮ ಸೈನಿಕರು ಯಾಕೆ ಹುತಾತ್ಮರಾದರು ಎಂದವರು ಪ್ರಶ್ನಿಸಿದರು.

ಚೀನಾದ ಒಲೈಕೆಯಿಂದಾಗಿ ಭಾರತವು ಭಾರೀ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಒಲೈಕೆ ದೌರ್ಬಲ್ಯದ ಸಂಕೇತವೆಂದು ಚೀನಿಯರು ಭಾವಿಸುತ್ತಾರೆ ಮತ್ತು ಅವರು ಅದನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳಲು ಬಯಸುತ್ತಾರೆ. ಒಂದು ವೇಳೆ ಯಾರೂ ಕೂಡಾ ನಮ್ಮ ಭೂಪ್ರದೇಶದೊಳಗೆ ನುಸುಳಿಲ್ಲವೆಂದಾದರೆ, ಭಾರತವು ಚೀನಾದ ಭೂಪ್ರದೇಶದೊಳಗೆ ಅತಿಕ್ರಮಣ ನಡೆಸಿತ್ತೆ?.

 ಪ್ರವೀಣ್ ಸಾವ್ನೆ, ಫೋರ್ಸ್ ಪತ್ರಿಕೆ ಸಂಪಾದಕ

ಭಾರತೀಯ ಭೂಪ್ರದೇಶದಿಂದ ಚೀನಿ ಒಳನುಸುಳುಕೋರರನ್ನು ಹೊರದಬ್ಬುವಾಗ ನಮ್ಮ 20 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಮೋದಿ ಯಾರೂ ಕೂಡಾ ನಮ್ಮ ಭೂಪ್ರದೇಶವನ್ನು ಪ್ರವೇಶಿಸಿಲ್ಲವೆಂದು ಹೇಳುತ್ತಾರೆ ಈ ಸೈನಿಕರು ಎಲ್ಲಿ ಹುತಾತ್ಮರಾದರು?, ಚೀನಾ ಹೇಳುವಂತೆ ಮೋದಿ ಕೂಡಾ ಯೋಧರು ಚೀನಾ ಗಡಿಯೊಳಗೆ ಪ್ರವೇಶಿಸಿದ್ದಾರೆಂದು ಹೇಳುತ್ತಿದ್ದಾರೆಯೇ?

ಅಜಯ್ ಶುಕ್ಲಾ - ಭಾರತದ ನಿವೃತ್ತ ಸೇನಾಧಿಕಾರಿ

 ಪ್ರಧಾನಿ ಮೋದಿಯವರು ಗಲ್ವಾನ್ ನದಿ ಕಣಿವೆ, ಪಂಗಾಂಗ್ ತ್ಸೊನಲ್ಲಿರುವ ಫಿಂಗರ್ಸ್‌ 4-8 ಅನ್ನು ಚೀನಾಕ್ಕೆ ಒಪ್ಪಿಸಿದ್ದಾರೆಯೇ?

ಅಜಯ್ ಶುಕ್ಲಾ, ಭಾರತದ ನಿವೃತ್ತ ಸೇನಾಧಿಕಾರಿ

ಯಾರೂ ಕೂಡಾ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿಲ್ಲವೆಂದಾದರೆ ನಮ್ಮ 20 ಸೈನಿಕರು ಯಾಕೆ ಸಾವನ್ನಪ್ಪಿದರು.

ಸುಶಾಂತ್ ಸಿಂಗ್, ರಕ್ಷಣಾ ಪತ್ರರ್ತ

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News