ಮಾಸ್ಕೊ ಭೇಟಿಗೆ ಮುನ್ನ ಚೀನಾ ಗಡಿಯಲ್ಲಿನ ಸ್ಥಿತಿ ಪುನರ್‌ಪರಿಶೀಲಿಸಿದ ರಾಜನಾಥ್ ಸಿಂಗ್

Update: 2020-06-21 14:31 GMT

ಹೊಸದಿಲ್ಲಿ,ಜೂ.21: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತನ್ನ ಮಾಸ್ಕೊ ಭೇಟಿಯ ಮುನ್ನಾದಿನವಾದ ರವಿವಾರ ಇಲ್ಲಿ ಲಡಾಖ್‌ನಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿನ ಉದ್ವಿಗ್ನ ಸ್ಥಿತಿಯ ಪುನರ್‌ಪರಿಶೀಲನೆಗಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರೊಂದಿಗೆ ಸಭೆಯನ್ನು ನಡೆಸಿದರು.

ಭೂಸೇನೆಯ ಮುಖ್ಯಸ್ಥ ಜ.ಎಂ.ಎಂ.ನರವಾಣೆ,ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ ಸಿಂಗ್ ಮತ್ತು ವಾಯುಪಡೆಯ ವರಿಷ್ಠ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಸೋಮವಾರ ಮಾಸ್ಕೊಕ್ಕೆ ತೆರಳಲಿರುವ ಸಿಂಗ್ ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯ ಮೇಲೆ ಅಂದಿನ ಸೋವಿಯತ್ ರಷ್ಯಾದ ವಿಜಯದ 75ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿರುವ ಭವ್ಯ ಮಿಲಿಟರಿ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ.

ಎಲ್‌ಎಸಿಯಲ್ಲಿ ಭಾರತವು ಉದ್ವಿಗ್ನತೆಯನ್ನು ಹೆಚ್ಚಿಸಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಭೆಯು,ಆದರೆ ಎದುರಾಳಿ ದೇಶವು ಉದ್ವಿಗ್ನತೆಯನ್ನು ಹೆಚ್ಚಿಸಿದರೆ ಭಾರತವೂ ಅದೇ ಧಾಟಿಯಲ್ಲಿ ಉತ್ತರಿಸಲಿದೆ ಎಂಬ ನಿರ್ಧಾರವನ್ನು ಕೈಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದವು.

ಸಶಸ್ತ್ರ ಪಡೆಗಳ ಯುದ್ಧ ಸನ್ನದ್ಧತೆಯನ್ನು ಮತ್ತು ಎಲ್‌ಎಸಿಯಲ್ಲಿ ಸ್ಥಿತಿಯನ್ನು ಸಭೆಯು ಪುನರ್‌ಪರಿಶೀಲಿಸಿತು.

ಸೇನೆಯು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ವಾಸ್ತವ ಸ್ಥಿತಿಯ ಹಿನ್ನೆಲೆಯಲ್ಲಿ ಅಗತ್ಯವಿರುವ ಯಾವುದೇ ಕ್ರಮವನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಚೀನಾದ ಯಾವುದೇ ಕುಟಿಲ ತಂತ್ರವನ್ನು ಪರಿಣಾಮಕಾರಿಯಾಗಿ ಎದುರಿಸಲು ಸೇನೆ ಮತ್ತು ವಾಯುಪಡೆ ಎಲ್‌ಎಸಿಯಲ್ಲಿ ತಮ್ಮ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಹೆಚ್ಚಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News