‘ಲಡಾಕ್ ಸಂಘರ್ಷ ಬಳಸಿ ಜನರನ್ನು ಭಾವನಾತ್ಮಕವಾಗಿ ದುರ್ಬಳಕೆ ಮಾಡಲಾಗುತ್ತಿದೆ’

Update: 2020-06-21 16:39 GMT

ಹೊಸದಿಲ್ಲಿ,ಜೂ.21: ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಕಳೆದ ವಾರ ಭಾರತ ಹಾಗೂ ಚೀನಿ ಯೋಧರ ನಡುವೆ ನಡೆದ ಸಂಘರ್ಷದ ಕುರಿತಾಗಿ ಜನರನ್ನು ಭಾವನಾತ್ಮಕವಾಗಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆಯೆಂದು ನಟ-ರಾಜಕಾರಣಿ ಕಮಲಹಾಸನ್ ಅವರು ಮೋದಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

  ಯಾರೂ ಕೂಡಾ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿಲ್ಲ ಹಾಗೂ ಭಾರತೀಯ ಯಾವುದೇ ಠಾಣೆಯನ್ನು ವಶಪಡಿಸಿಕೊಂಡಿಲ್ಲ ಎಂದು ಶುಕ್ರವಾರ ನಡೆದ ಸರ್ವಪಕ್ಷಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆಯನ್ನು ಪ್ರಶ್ನಿಸಿದ ಅವರು, ಕಿಡಿಗೇಡಿತನದ ವ್ಯಾಖ್ಯಾನವನ್ನು ನೀಡುತ್ತಿದ್ದಾರೆಂಬ ಕೇಂದ್ರ ಸರಕಾರದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

 ‘‘ ಇಂತಹ ಹೇಳಿಕೆಗಳ ಮೂಲಕ ಜನರನ್ನು ಭಾವನಾತ್ಮಕವಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ಮುಂದುವರಿಸುವುದೇ ನಿಜವಾದ ಕಿಡಿಗೇಡಿತನವಾಗಿದೆ. ಇದನ್ನು ನಿಲ್ಲಿಸುವಂತೆ ಪ್ರಧಾನಿ ಹಾಗೂ ಅವರ ಬೆಂಬಲಿಗರನ್ನು ನಾನು ವಿನಮ್ರಪೂರ್ವಕವಾಗಿ ಕೋರುತ್ತೇನೆ” ಎಂದವರು ಹೇಳಿದ್ದಾರೆ.

ಪ್ರಶ್ನಿಸುವುದನ್ನು ದೇಶವಿರೋಧಿಯೆಂದು ಪರಿಗಣಿಸಲು ಸಾಧ್ಯವಿಲ್ಲ. ಪ್ರಶ್ನೆಗಳನ್ನು ಕೇಳುವ ಹಕ್ಕು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಸತ್ಯವನ್ನು ನಾವು ಕೇಳುವವರೆಗೆ ನಾವು ಪ್ರಶ್ನಿಸುವುದನ್ನು ಮುಂದುವರಿಸುತ್ತೇವೆ’’ ಎಂದು ಮಕ್ಕಳ್ ನೀಧಿ ಮಯ್ಯಮ್ ಪಕ್ಷದ ವರಿಷ್ಠರೂ ಆದ ಕಮಲ್ ಹಾಸನ್ ಹೇಳಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆಯು ಸೇನೆ ಹಾಗೂ ವಿದೇಶಾಂಗ ಸಚಿವಾಲಯದ ಹೇಳಿಕೆಗಳಿಗಿಂತ ತೀರಾ ವ್ಯತಿರಿಕ್ತವಾಗಿದೆ ಎಂದು ಕಮಲಹಾಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News