×
Ad

ಸೇನೆಯ ರಕ್ಷಣಾ ಉಪಕರಣಗಳಿಗೆ ‘ಮೇಡ್ ಇನ್ ಚೈನಾ’ ನಂಟು!

Update: 2020-06-21 22:14 IST

ಹೊಸದಿಲ್ಲಿ,ಜೂ.21: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದ ಎರಡು ದಿನಗಳ ಬಳಿಕ, ಅಂದರೆ ಜೂ.18ರಂದು ರಕ್ಷಣಾ ಸಚಿವಾಲಯವು ಲೇಹ್ ಸೇರಿದಂತೆ ಮುಂಚೂಣಿ ಪ್ರದೇಶಗಳಲ್ಲಿ ನಿಯೋಜಿತ ಸೇನಾ ಸಿಬ್ಬಂದಿಗಳಿಗಾಗಿ ಅಂದಾಜು ಎರಡು ಲಕ್ಷ ರಕ್ಷಣಾ ಉಪಕರಣಗಳು ಮತ್ತು ಗುಂಡು ನಿರೋಧಕ ಜಾಕೆಟ್‌ಗಳ ಪೂರೈಕೆಗಾಗಿ ಅವುಗಳ ತಯಾರಕರನ್ನು ಸಂಪರ್ಕಿಸಿದೆ.

ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಸದ್ಯದ ಮೂಲ ಉಪಕರಣ ತಯಾರಕರ (ಒಇಎಂ) ಪೈಕಿ ಹೆಚ್ಚಿನವರು ತಮ್ಮ ಉತ್ಪನ್ನಗಳ ತಯಾರಿಕೆಗೆ ಚೀನಿ ಕಚ್ಚಾ ಸಾಮಗ್ರಿಗಳನ್ನು ಬಳಸುತ್ತಿದ್ದಾರೆ ಎನ್ನುವುದು ಇದಕ್ಕೆ ಹೊಸ ತಿರುವನ್ನು ನೀಡಿದೆ.

ಇದರಲ್ಲಿ 2017ರಲ್ಲಿ ಗುತ್ತಿಗೆಯನ್ನು ಪಡೆದಿದ್ದ ಕಂಪನಿಯೂ ಸೇರಿದ್ದು ಅದೀಗ 1.86 ಲ.ಗುಂಡು ನಿರೋಧಕ ಜಾಕೆಟ್‌ಗಳನ್ನು ಪೂರೈಸುವ ಹಂತದಲ್ಲಿದೆ. ಅಂದು ಎಸ್‌ಎಂಪಿಪಿ ಲಿ.ಗೆ 639 ಕೋ.ರೂ.ಗಳ ಗುತ್ತಿಗೆಯನ್ನು ಪ್ರಕಟಿಸಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೇನೆಗಾಗಿ ರಕ್ಷಣಾ ಜಾಕೆಟ್‌ಗಳನ್ನು ತಯಾರಿಸಲು ಚೀನಾದಿಂದ ಕಚ್ಚಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧವನ್ನು ವಿಧಿಸಲಾಗಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಆದರೆ ಈಗ ಬದಲಾಗಿರುವ ಪರಿಸ್ಥಿತಿಗಳಲ್ಲಿ ಈ ಬಗ್ಗೆ ಪುನರ್‌ಪರಿಶೀಲಿಸಬೇಕೆಂಬ ಕರೆಗಳು ಕೇಳಿಬರುತ್ತಿವೆ.

ನೀತಿ ಆಯೋಗದ ಸದಸ್ಯ ಹಾಗೂ ಡಿಆರ್‌ಡಿಒದ ಮಾಜಿ ಮುಖ್ಯಸ್ಥ ವಿ.ಕೆ.ಸಾರಸ್ವತ ಅವರು, ಈ ಆಮದುಗಳ ಬಗ್ಗೆ ಪುನರ್‌ಪರಿಶೀಲನೆಗೆ ಆಗ್ರಹಿಸಿದ್ದಾರೆ. ‘ದೂರಸಂಪರ್ಕ ಮತ್ತು ನಮ್ಮ ಯೋಧರು ಧರಿಸುವ ಗುಂಡು ನಿರೋಧಕ ಜಾಕೆಟ್‌ಗಳು ಸೇರಿದಂತೆ ರಕ್ಷಣಾ ಉಪಕರಣಗಳಂತಹ ವ್ಯೂಹಾತ್ಮಕ ಕ್ಷೇತ್ರಗಳಲ್ಲಿ ಚೀನಿ ಕಚ್ಚಾ ಸಾಮಗ್ರಿಗಳ ಆಮದಿಗೆ ನಾವು ಉತ್ತೇಜನವನ್ನು ನೀಡಬಾರದು ’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News