ಕೊರೋನ ಚಿಕಿತ್ಸೆಗೆ 19 ಮಹಡಿಯ ಹೊಚ್ಚಹೊಸ ಕಟ್ಟಡ ನೀಡಿದ ಮುಂಬೈ ಬಿಲ್ಡರ್

Update: 2020-06-22 04:48 GMT
Photo: twitter/MondMoumita

ಮುಂಬೈ, ಜೂ.22: ಭೀಕರ ಕೊರೋನ ಸಾಂಕ್ರಾಮಿಕ ವಿರುದ್ಧ ದೇಶದ ವಾಣಿಜ್ಯ ರಾಜಧಾನಿ ಹೋರಾಡುತ್ತಿರುವ ನಡುವೆ ಹಲವು ಮಂದಿ ಮುಂಬೈಗರು ಸಹಾಯಹಸ್ತ ಚಾಚುತ್ತಿದ್ದಾರೆ. ಮುಂಬೈನ ಬಿಲ್ಡರ್ ಒಬ್ಬರು ಹೊಸದಾಗಿ ನಿರ್ಮಿಸಿದ 19 ಮಹಡಿಯ ಕಟ್ಟಡವನ್ನೇ ಕೋವಿಡ್-19 ಚಿಕಿತ್ಸಾ ಸೌಲಭ್ಯಕ್ಕಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ದಾರೆ.

ಶೀಜಿ ಶರಣ್ ಡೆವಲಪರ್ಸ್‌ ಮಾಲಕ ಮೆಹುಲ್ ಸಾಂಘಿ, ಫ್ಲ್ಯಾಟ್‌ನ ಅನುಭೋಗದಾರರ ಜತೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇವೆ. ಈ ಕಟ್ಟಡವನ್ನು ಕೋವಿಡ್-19 ರೋಗಿಗಳಿಗೆ ಕ್ವಾರಂಟೈನ್ ಕೇಂದ್ರವಾಗಿ ಬಳಸಲಾಗುತ್ತದೆ ಎಂದು ವಿವರಿಸಿದ್ದಾರೆ.

ಮಲದ್‌ನ ಎಸ್‌ವಿ ರಸ್ತೆಯಲ್ಲಿರುವ ಈ ವಸತಿ ಸಂಕೀರ್ಣ 130 ಫ್ಯ್ಲಾಟ್‌ಗಳನ್ನು ಹೊಂದಿದ್ದು, ಸರ್ಕಾರದಿಂದ ವಾಸಯೋಗ್ಯ ಪ್ರಮಾಣಪತ್ರವನ್ನೂ ಪಡೆದಿತ್ತು. ಫ್ಲ್ಯಾಟ್‌ಗಳ ಮಾಲಕರಿಗೆ ಹಸ್ತಾಂತರಿಸಲು ಸಜ್ಜಾಗಿತ್ತು. ಒಂದು ಫ್ಲ್ಯಾಟ್‌ಗೆ 4 ಮಂದಿ ರೋಗಿಗಳಂತೆ 300 ಮಂದಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತಿದೆ. ಈ ನಿರ್ಧಾರದಲ್ಲಿ ಮಲದ್ ಸಂಸದ ಗೋಪಾಲ ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಲದ್‌ನಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಘ್ವಿಯವರನ್ನು ಸಂಪರ್ಕಿಸಿ, ಕಟ್ಟಡ ನೀಡುವ ಬಗ್ಗೆ ಮನವೊಲಿಸಿದ್ದಾಗಿ ಗೋಪಾಲ್ ಶೆಟ್ಟಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News