ಜಗನ್ನಾಥ ರಥಯಾತ್ರೆಗೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ

Update: 2020-06-22 08:17 GMT

ಭುಬನೇಶ್ವರ್: ಕೋವಿಡ್-19 ಹಿನ್ನೆಲೆಯಲ್ಲಿ ಈ ವರ್ಷದ ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶವನ್ನು ವಾಪಸ್ ಪಡೆಯಬೇಕೆಂದು ಕೋರಿ ನ್ಯಾಯಾಲಯದ ಕದ ತಟ್ಟಿರುವ 21 ಮಂದಿಯ ಪೈಕಿ ಒಡಿಶಾದ ನಯಾಘರ್ ಜಿಲ್ಲೆಯ 19 ವರ್ಷದ ಮುಸ್ಲಿಂ ವಿದ್ಯಾರ್ಥಿಯೊಬ್ಬ ಕೂಡ ಇದ್ದಾನೆ.

ಜೂನ್ 23ರಂದು ಒಡಿಶಾದ ಪುರಿಯಲ್ಲಿ ನಡೆಯಬೇಕಿದ್ದ ಜಗನ್ನಾಥ ರಥಯಾತ್ರೆಯನ್ನು ಸಾರ್ವಜನಿಕ ಆರೋಗ್ಯ ಹಾಗೂ ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ ಅನುಮತಿಸಲಾಗದ. ಅನುಮತಿ ನೀಡಿದರೆ ಜಗನ್ನಾಥ ದೇವರು ನಮ್ಮನ್ನು ಕ್ಷಮಿಸಲಾರನು ಎಂದು ಸುಪ್ರೀಂ ಕೋರ್ಟ್ ತನ್ನ ಜೂನ್ 18ರ ಆದೇಶದಲ್ಲಿ ಹೇಳಿತ್ತು.

ಇದೀಗ ಸುಪ್ರೀಂ ಕೋರ್ಟ್ ಕದ ತಟ್ಟಿರುವ 21 ಮಂದಿಯ ಪೈಕಿ ಒಬ್ಬನಾಗಿರುವ ಅಫ್ತಾಬ್ ಹುಸೈನ್ ನಯಾಘರ್ ಸ್ವಾಯತ್ತ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆತನನ್ನು ಈಗ ರಾಜ್ಯದ ಎರಡನೇ ‘ಸಾಲಾಬೇಗ’ ಎಂದೇ ಬಣ್ಣಿಸಲಾಗುತ್ತಿದೆ. ಪುರಿ ಜಗನ್ನಾಥ ರಥಯಾತ್ರೆಯ ಮೂರು ಕಿಮೀ ಹಾದಿಯಲ್ಲಿ ರಥವು ಕೆಲ ಕ್ಷಣಗಳ ಕಾಲ ಗ್ರ್ಯಾಂಡ್ ರಸ್ತೆ ಪಕ್ಕ ಮುಸ್ಲಿಂ ವ್ಯಕ್ತಿ ‘ಸಾಲಾಬೇಗ’ ಅವರ ಗೋರಿ ಸಮೀಪ ಗೌರವಾರ್ಥವಾಗಿ ನಿಲ್ಲುತ್ತದೆ. ಸಾಲಾಬೇಗ ಮೊಘಲ್ ಸುಬೇದಾರ್ ಒಬ್ಬರ ಪುತ್ರನಾಗಿದ್ದು, 17ನೇ ಶತಮಾನದವರು.

ಇದೀಗ ಸುಪ್ರೀಂ ಕದ ತಟ್ಟಿರುವ ಅಫ್ತಾಬ್ ಗೆ ಬಾಲ್ಯದಿಂದಲೂ ಜಗನ್ನಾಥ ದೇವಾಲಯವೆಂದರೆ ಅಚ್ಚುಮೆಚ್ಚು. ಜಗನ್ನಾಥ ದೇವರನ್ನು ತಾನು ಆರಾಧಿಸುವುದಕ್ಕೆ ಹೆತ್ತವರು ಅಥವಾ ಸೋದರ ಯಾವತ್ತೂ ಆಕ್ಷೇಪಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News