ಭಾರತೀಯ ಯೋಧರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆದಿತ್ತು: ವರದಿ

Update: 2020-06-22 08:55 GMT

ಹೊಸದಿಲ್ಲಿ: ಲಡಾಖ್‍ ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಗಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ಚೀನಿ ಸೈನಿಕರ ಜತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಬಿ ಸಂತೋಷ್ ಬಾಬು ಸಹಿತ  20 ಮಂದಿ ಭಾರತೀಯ ಯೋಧರ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿತ್ತು. ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು ಹಾಗೂ ಮೂಳೆ ಮುರಿತಗಳುಂಟಾಗಿದ್ದವು ಎಂದು ಮೂಲಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ.

ಆ ಕಡಿದಾದ ಪ್ರದೇಶದಲ್ಲಿ ಸೈನಿಕರು ಪರಸ್ಪರ ಕೈಮಿಲಾಯಿಸಿಕೊಂಡು ಹಲವಾರು ಗಂಟೆಗಳ ಕಾಲ ಹೋರಾಡಿದ್ದರೆಂದು ತಿಳಿದು ಬಂದಿದೆ. ಹಲವು ಭಾರತೀಯ ಯೋಧರನ್ನು ಒಂದೋ ಘರ್ಷಣೆ ವೇಳೆ ನದಿಗೆ ತಳ್ಳಲಾಗಿತ್ತು ಅಥವಾ ಅವರು ನದಿಗೆ ಬಿದ್ದಿರಬೇಕೆಂದು ಊಹಿಸಲಾಗಿದೆ ಎಂದು ವರದಿ ತಿಳಿಸಿದೆ.

“ಯೋಧರ  ಮೃತದೇಹಗಳನ್ನು ಪರಿಶೀಲಿಸಿದಾಗ ಅವರು ಭೀಕರ ಕಾಳಗದಲ್ಲಿ ತೊಡಗಿದ್ದರೆಂದು ತಿಳಿಯುತ್ತದೆ. ಅವರು ಬಹಳಷ್ಟು ಚೀನೀ ಯೋಧರನ್ನು ಕೊಂದಿರಬಹುದು. ಅವರಲ್ಲಿ ಹಲವರ ಕೈಕಾಲುಗಳಲ್ಲಿ ಹಲವು ಮೂಳೆ ಮುರಿತವಾಗಿತ್ತು'' ಎಂದು ಯೋಧರ ಮೃತದೇಹಗಳನ್ನು ನೋಡಿದ್ದ  ಹಾಗೂ ತಮ್ಮ ಹೆಸರು ಹೇಳಲಿಚ್ಛಿಸದ ಲೇಹ್‍ನ ಸೋನಂ ನುರ್ಬೂ ಸ್ಮಾರಕ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

“ತಮ್ಮ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಅವರ ಮೇಲೆ ದಾಳಿಯಾದ ಬೆನ್ನಿಗೇ ಭಾರತೀಯ ಯೋಧರು ತಮ್ಮಲ್ಲಿದ್ದ ಎಲ್ಲಾ ಆಯುಧಗಳೊಂದಿಗೆ ಘರ್ಷಣೆಗೆ ಇಳಿದಿದ್ದರು ಹಾಗೂ ಬಲವಾದ ತಿರುಗೇಟು ನೀಡಿದ್ದರು'' ಎಂದು ಆಸ್ಪತ್ರೆಗೆ ದಾಖಲಾದ ಗಾಯಾಳು ಸೈನಿಕರಿಂದ ತಿಳಿದು ಬಂದಿದೆಯೆಂದು ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News