ಫ್ಯಾಕ್ಟ್ ಚೆಕ್: ‘ಭಾರತದ ಧ್ವಜವನ್ನು ಸುಟ್ಟ ಎಐಎಂಐಎಂ ಸದಸ್ಯರು’ ಎಂದು ವೈರಲ್ ಆಗುತ್ತಿರುವ ಫೋಟೊ ನಕಲಿ

Update: 2020-06-22 11:55 GMT

ಹೊಸದಿಲ್ಲಿ :  ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಬ್ಯಾನರ್ ಎದುರು ನಿಂತು ಇಬ್ಬರು ಭಾರತದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚುವಂತೆ ಕಾಣುವ ಫೋಟೋಗಳು ಫೇಸ್ ಬುಕ್ ಹಾಗೂ ಟ್ವಿಟರ್ ಗಳಲ್ಲಿ ವೈರಲ್ ಆಗಿದೆ.

“ಉತ್ತರ ಪ್ರದೇಶದಲ್ಲಿ ಎಐಎಂಐಎಂನ ಪ್ರತಾಪ್‍ ಗಢ್ ಘಟಕದ ಸದಸ್ಯರಾದ ಮುಹಮ್ಮದ್ ಸಲೀಂ ಅನ್ಸಾರಿ ಎಂಬವರು  ಧ್ವಜಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಜನರೇ ದಂಗೆಗಳಿಗೆ ಕಾರಣರಾಗುತ್ತಾರೆ'' ಎಂಬ ಪೋಸ್ಟ್ ಕೂಡ ಈ ಫೋಟೋಗಳ ಜತೆಗಿತ್ತು. ಹಲವು ಮಂದಿ ಇದೇ ಹೇಳಿಕೆ ನೀಡಿ ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಈ ಬಗ್ಗೆ Altnews.in ಫೇಸ್ ಬುಕ್‍ ನಲ್ಲಿ ‘ಪ್ರತಾಪ್ ‍ಘಡ್ ಕೆ ಎಐಎಂಐಎಂ' ಎಂಬ ಕೀವರ್ಡ್ ಹಾಕಿ ಹುಡುಕಿದಾಗ ಫರ್ವಾನ ಮಲಿಕ್ ಝಿಯಾ ಎಂಬವರು ನೈಜ ಫೋಟೊಗಳನ್ನು ಜೂನ್ 14ರಂದು ಪೋಸ್ಟ್ ಮಾಡಿದ್ದರೆಂದು ತಿಳಿದು ಬಂತು. ನೇಪಾಳ ಸರಕಾರ ಭಾರತದ ಭೂಭಾಗಗಳನ್ನು ಸೇರಿಸಿ ತನ್ನ ಪರಿಷ್ಕೃತ ಭೂಪಟವನ್ನು ಅಂಗೀಕರಿಸಿದ್ದನ್ನು ಪ್ರತಿಭಟಿಸಿ ಎಐಎಂಐಎಂ ಸದಸ್ಯರು ನೇಪಾಳದ ಧ್ವಜವನ್ನು ಸುಟ್ಟಿದ್ದರು ಎಂದು ಆಕೆ ಬರೆದಿದ್ದರು.  ಈ ಪೋಸ್ಟ್ ಪ್ರಕಾರ ಚಿತ್ರದಲ್ಲಿ ಕಾಣಿಸಿರುವವರು ಸಲೀಂ ಅಹ್ಮದ್ ಅನ್ಸಾರಿ ಹಾಗೂ ಇಸ್ರಾರ್ ಅಹ್ಮದ್ ಆಗಿದ್ದಾರೆ.

ಈ ಸುಳಿವನ್ನು ಬಳಸಿ Altnews.in ಟ್ವಿಟರ್ ಸರ್ಚ್ ಮಾಡಿದಾಗ  ಭಾರತದ ಧ್ವಜವನ್ನು ಸುಡಲಾಗಿದೆ ಎಂಬ ವಿವರಣೆಯೊಂದಿಗೆ ಪೋಸ್ಟ್ ಮಾಡಲಾಗಿರುವ ವೈರಲ್ ಚಿತ್ರ ಸುಳ್ಳು ಎಂದು ಪ್ರತಾಪ್‍ ಗಢ ಪೊಲೀಸರು ಮಾಡಿದ ಟ್ವೀಟ್ ದೊರಕಿದೆ.

ನೇಪಾಳ ಸಂಸತ್ತು  ಭಾರತದ ಭೂಭಾಗಗಳನ್ನು ಸೇರಿಸಿ ಅಂಗೀಕರಿಸಿದ ಭೂಪಟವನ್ನು  ವಿರೋಧಿಸಿ ನೇಪಾಳ ಧ್ವಜವನ್ನು ಸುಟ್ಟು ಹಾಕಲಾಗಿತ್ತು  ಎಂದು  ಪ್ರತಾಪಗಢ ಪೊಲೀಸರ ಟ್ವೀಟ್ ಕೂಡ ಹೇಳಿತ್ತು. ಪ್ರತಾಪಗಢ ಪೊಲೀಸರು ತಮ್ಮ ಸ್ಪಷ್ಟನೆಯೊಂದಿಗೆ ವರದಿಯೊಂದರ ಕ್ಲಿಪ್ಪಿಂಗ್ ಕೂಡ ಪೋಸ್ಟ್ ಮಾಡಿದ್ದು ಅದರಲ್ಲಿ ಆ ಇಬ್ಬರು ವ್ಯಕ್ತಿಗಳು ನೇಪಾಳದ ಧ್ವಜವನ್ನು ಸುಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಮೂಲ ಚಿತ್ರದಲ್ಲಿ ಹಿನ್ನೆಲೆಯಲ್ಲಿರುವ ಪೋಸ್ಟರ್‍ನಲ್ಲಿ ನೇಪಾಳ್ ಮುರ್ದಾಬಾದ್ ಎಂದೂ ಬರೆದಿರುವುದು ಕಾಣಿಸುತ್ತದೆ.

ಆದರೆ ನೇಪಾಳದ ಧ್ವಜದ ಸ್ಥಾನದಲ್ಲಿ ಭಾರತದ ಧ್ವಜದ ಫೋಟೊವನ್ನು ಎಡಿಟ್ ಮಾಡಿ ಈ ಮೂಲಕ ದ್ವೇಷ ಹರಡಲು ದುಷ್ಕರ್ಮಿಗಳು ಯತ್ನಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News