ಮಗಳನ್ನು ವಿವಾಹವಾಗಿದ್ದ ದಲಿತ ಯುವಕನ ಹತ್ಯೆ: ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿದ್ದ ವ್ಯಕ್ತಿಯ ಖುಲಾಸೆಗೊಳಿಸಿದ ಹೈಕೋರ್ಟ್

Update: 2020-06-22 12:00 GMT

ಚೆನ್ನೈ: ಮೇಲ್ಜಾತಿಯ ಯುವತಿಯನ್ನು ವಿವಾಹವಾಗಿದ್ದಕ್ಕಾಗಿ 23 ವರ್ಷದ ದಲಿತ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಗೂ ಮರಣದಂಡನೆ ಶಿಕ್ಷೆ ಘೋಷಿಸಲ್ಪಟ್ಟ ಯುವತಿಯ ತಂದೆಯನ್ನು ಇಂದು ಮದ್ರಾಸ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಜತೆಗೆ ಇತರ ಐವರು ಆರೋಪಿಗಳ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿ ಅವರಿಗೆ 25 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ.

ಡಿಸೆಂಬರ್ 2017ರಲ್ಲಿ ವಿಚಾರಣಾಧೀನ ನ್ಯಾಯಾಲಯವು ಯುವತಿಯ ತಂದೆ ಮತ್ತು ಇತರ ಆರು ಮಂದಿಗೆ ಮರಣದಂಡನೆ ವಿಧಿಸಿತ್ತು.

ಮಾರ್ಚ್ 2016ರಂದು ತಮಿಳುನಾಡಿನ ತಿರುಪ್ಪುರ್ ಪಟ್ಟಣದ ಮಾರ್ಕೆಟ್ ಪ್ರದೇಶದಲ್ಲಿ ವಿ ಶಂಕರ್ ಎಂಬ ಯುವಕನ ಹತ್ಯೆ ನಡೆದಿತ್ತು. ಆತನ ಪತ್ನಿ, 19 ವರ್ಷದ ಕೌಸಲ್ಯಳ ಮೇಲೆ ಕೂಡ ಬೈಕ್‍ ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಕೌಸಲ್ಯಾಳ ತಂದೆ ಚಿನ್ನಸಾಮಿಯೇ ತನ್ನ ಅಳಿಯನ ಕೊಲೆಗೆ ಸುಪಾರಿ ನೀಡಿದವನಾಗಿದ್ದು ಇಡೀ ಕೊಲೆ ಕೃತ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.

ಆರೋಪಿಗಳು ತಮಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟಿನ ಕದ ತಟ್ಟಿದ್ದರು.

ಕೌಸಲ್ಯಾಳ ತಾಯಿ, ಮಾವ ಮತ್ತು ಕಾಲೇಜ್ ವಿದ್ಯಾರ್ಥಿಯೊಬ್ಬನ ವಿರುದ್ಧ ಸಾಕ್ಷ್ಯಗಳ ಕೊರತೆಯಿದೆಯೆಂದು ವಿಚಾರಣಾಧೀನ ನ್ಯಾಯಾಲಯ ಅವರನ್ನು ಖುಲಾಸೆಗೊಳಿತ್ತು. ಅವರನ್ನು ಖುಲಾಸೆಗೊಳಿಸಿ ನೀಡಿರುವ ತೀರ್ಪನ್ನು ಇಂದು ಹೈಕೋರ್ಟ್ ಎತ್ತಿ ಹಿಡಿದಿದೆ.

ಯುವತಿಯ ಕುಟುಂಬ ರಾಜಕೀಯವಾಗಿ ಪ್ರಬಲವಾಗಿರುವ ತೇವರ್ ಜಾತಿಗೆ ಸೇರಿತ್ತು. ಕೌಸಲ್ಯ ಪರಿಶಿಷ್ಟ ವರ್ಗದ ಶಂಕರ್ ನನ್ನು ವರಿಸಿರುವುದು ಅವರಿಗೆ ಹಿಡಿಸಿರಲಿಲ್ಲ. ಆದರೆ ಅವರಿಬ್ಬರು ಎಲ್ಲರ ವಿರೋಧ ಎದುರಿಸಿ ವಿವಾಹವಾದ ಎಂಟು ತಿಂಗಳಲ್ಲೇ ಶಂಕರ್‍ ನ ಬರ್ಬರ ಕೊಲೆ ನಡೆದಿತ್ತು. ಈ ಘಟನೆಯ ನಂತರ ಕೌಸಲ್ಯಾ ಶಂಕರ್ ಕುಟುಂಬದ ಜತೆಗೇ ನೆಲೆಸಿದ್ದಳು. ಘಟನೆಯಿಂದ ಚೇತರಿಸಿಕೊಂಡ ಬಳಿಕೆ ಆಕೆ ಡಿಸೆಂಬರ್ 2018ರಲ್ಲಿ ಮರುವಿವಾಹವಾಗಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News