ಮುಕೇಶ್ ಅಂಬಾನಿ ಜಗತ್ತಿನ 9ನೆ ಅತಿ ಶ್ರೀಮಂತ

Update: 2020-06-22 16:11 GMT

ನ್ಯೂಯಾರ್ಕ್, ಜೂ. 22: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿಯ ನಿವ್ವಳ ಸಂಪತ್ತು 64.5 ಬಿಲಿಯ ಡಾಲರ್ (4,90,506 ಕೋಟಿ ರೂಪಾಯಿ)ಗೆ ಏರಿದ್ದು, ಇದರೊಂದಿಗೆ ಅವರು ಜಗತ್ತಿನ ಒಂಬತ್ತನೇ ಅತಿ ಶ್ರೀಮಂತರಾಗಿದ್ದಾರೆ.

ಅದೇ ವೇಳೆ, ಜಾಗತಿಕ 10 ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಏಶ್ಯನ್ ಉದ್ಯಮಿಯಾಗಿದ್ದಾರೆ ಎಂದು ಬ್ಲೂಮ್‌ ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.

63 ವರ್ಷದ ಅಂಬಾನಿ ಒರೇಕಲ್ ಕಾರ್ಪ್‌ನ ಲ್ಯಾರಿ ಎಲಿಸನ್ ಮತ್ತು ಅತಿ ಶ್ರೀಮಂತ ಮಹಿಳೆಯಾಗಿರುವ ಫ್ರಾನ್ಸ್‌ನ ಫ್ರಾಂಕೋಯಿಸ್ ಬೆಟನ್‌ಕೋರ್ಟ್ ಮೇಯರ್ಸ್‌ರನ್ನು ಹಿಂದಿಕ್ಕಿ ಒಂಭತ್ತನೇ ಸ್ಥಾನಕ್ಕೆ ನೆಗೆದರು.

ಕೊರೋನ ಅವಧಿಯಲ್ಲಿ ಸಂಪತ್ತು ಹೆಚ್ಚಿಸಿಕೊಂಡ ಅಂಬಾನಿ

ರಿಲಯನ್ಸ್‌ನಲ್ಲಿ 42 ಶೇಕಡ ಪಾಲು ಹೊಂದಿರುವ ಅಂಬಾನಿಯು ತನ್ನ ಕಂಪೆನಿಯ ಡಿಜಿಟಲ್ ಘಟಕ ಜಿಯೋ ಪ್ಲಾಟ್‌ ಫಾರ್ಮ್ಸ್ ಲಿಮಿಟೆಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಲಾಭ ಗಳಿಸಿದ್ದಾರೆ. ರಿಲಯನ್ಸ್‌ನ ಶೇರುಗಳ ಮೌಲ್ಯ ಮಾರ್ಚ್‌ನಲ್ಲಿ ದ್ವಿಗುಣಗೊಂಡಿತ್ತು. ಆದರೆ, ಈ ಅವಧಿಯಲ್ಲಿ ಕೊರೋನ ವೈರಸ್ ಪರಿಣಾಮದಿಂದಾಗಿ ಇತರ ಬಿಲಿಯಾಧೀಶರು ಸಂಪತ್ತು ಕಳೆದುಕೊಂಡಿದ್ದರು.

‘‘ಕೋವಿಡ್-19 ಹರಡುವುದನ್ನು ತಡೆಯಲು ಹೇರಲಾದ ಬೀಗಮುದ್ರೆಯ ಸಮಯದಲ್ಲಿ ಭಾರತೀಯ ಆರ್ಥಿಕತೆಯು ಧೂಳೀಪಟವಾಗಿದ್ದರೆ, ಅಂಬಾನಿಯ ಕಂಪೆನಿಗಳು, ಅದರಲ್ಲೂ ಮುಖ್ಯವಾಗಿ ಟೆಲಿಕಾಮ್ ದೈತ್ಯ ಜಿಯೊ ಸಮೃದ್ಧಿಯನ್ನು ಕಂಡಿವೆ ಹಾಗೂ ಅವರ ವೈಯಕ್ತಿಕ ಸಂಪತ್ತಿನಲ್ಲಿ ಅಗಾಧ ಏರಿಕೆಯಾಗಿದೆ’’ ಎಂದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕ ಅಧ್ಯಯನಗಳು ಮತ್ತು ಯೋಜನಾ ಕೇಂದ್ರದ ಅಧ್ಯಕ್ಷ ಜಯತಿ ಘೋಷ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News