ಎಚ್-1ಬಿ ವೀಸಾಗೆ ತಾತ್ಕಾಲಿಕ ನಿಷೇಧ ಹೇರಿದ ಅಮೆರಿಕ

Update: 2020-06-23 15:19 GMT

ವಾಶಿಂಗ್ಟನ್, ಜೂ. 23: ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಸುಧಾರಣೆ ತರುವಂತೆ ಹಾಗೂ ಪ್ರತಿಭೆ ಆಧಾರಿತ ವಲಸೆ ವ್ಯವಸ್ಥೆಯತ್ತ ಮುನ್ನಡೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಆಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.

‘‘ಪ್ರತಿಭೆ ಆಧಾರಿತ ವಲಸೆ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ’’ ಎಂದು ಈ ವರ್ಷದ ಕೊನೆಯವರೆಗೆ ಎಚ್-1ಬಿ ಮತ್ತು ಇತರ ಉದ್ಯೋಗ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಟ್ರಂಪ್ ಆದೇಶ ಹೊರಡಿಸಿದ ಸ್ವಲ್ಪವೇ ಹೊತ್ತಿನ ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ಶ್ವೇತಭವನ ತಿಳಿಸಿದೆ. ಗರಿಷ್ಠ ಕೌಶಲ ಹೊಂದಿದ ಉದ್ಯೋಗಿಗಳಿಗೆ ಆದ್ಯತೆ ನೀಡುವ ಹಾಗೂ ಅಮೆರಿಕನ್ನರ ಉದ್ಯೋಗಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತವು ವಲಸೆ ವ್ಯವಸ್ಥೆಗೆ ಸುಧಾರಣೆಗಳನ್ನು ತರುತ್ತದೆ ಎಂದು ಹೇಳಿಕೆ ತಿಳಿಸಿದೆ.

ಪ್ರಸ್ತಾವಿತ ಸುಧಾರಣೆಗಳ ಪ್ರಕಾರ, ಅತ್ಯಧಿಕ ವೇತನ ಪಡೆಯುವ ಉದ್ಯೋಗಿಗಳಿಗೆ ಎಚ್-1ಬಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾಗುವುದು ಹಾಗೂ ಆಮೂಲಕ ಗರಿಷ್ಠ ಕೌಶಲ ಹೊಂದಿರುವ ಅಭ್ಯರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಶ್ವೇತಭವನ ತಿಳಿಸಿದೆ.

ಈ ಸುಧಾರಣೆಗಳು ಅಮೆರಿಕದ ಉದ್ಯೋಗಿಗಳ ವೇತನಗಳನ್ನು ರಕ್ಷಿಸುವಲ್ಲಿ ನೆರವಾಗುತ್ತವೆ ಹಾಗೂ ಅಮೆರಿಕವನ್ನು ಪ್ರವೇಶಿಸುವ ವಿದೇಶಿ ಉದ್ಯೋಗಿಗಳು ಗರಿಷ್ಠ ಕೌಶಲ ಹೊಂದಿದವರು ಹಾಗೂ ಅಮೆರಿಕನ್ನರ ಉದ್ಯೋಗಗಳಿಗೆ ಬೆದರಿಕೆಯಲ್ಲ ಎನ್ನುವುದನ್ನು ಖಚಿತಪಡಿಸುತ್ತವೆ ಎಂದು ಶ್ವೇತಭವನ ಹೇಳಿದೆ.

ಈವರೆಗೆ ಎಚ್-1ಬಿ ವೀಸಾಗಳನ್ನು ಬಳಸಿ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕವನ್ನು ಪ್ರವೇಶಿಸುತ್ತಿದ್ದರು. ಇನ್ನು ಈ ಪ್ರವೃತ್ತಿಗೆ ತಡೆಬೀಳುವ ಭೀತಿ ಎದುರಾಗಿದೆ.

ಆದರೆ ಈ ಆದೇಶವು ಹೊಸ ಉದ್ಯೋಗ ವೀಸಾಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ವೀಸಾಗಳಿಗೆ ಇದು ಅನ್ವಯಿಸುವುದಿಲ್ಲ.

ಅಮೆರಿಕದಲ್ಲಿ 5.25 ಲಕ್ಷ ಉದ್ಯೋಗಗಳ ತೆರವು:  ಎಚ್-1ಬಿ ಮತ್ತು ಎಲ್1 ಸೇರಿದಂತೆ ಅಮೆರಿಕದ ಉದ್ಯೋಗ ವೀಸಾಗಳ ತಾತ್ಕಾಲಿಕ ರದ್ದತಿಯಿಂದಾಗಿ ದೇಶದಲ್ಲಿ ಸುಮಾರು 5.25 ಲಕ್ಷ ಉದ್ಯೋಗಗಳು ತೆರವುಗೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

‘‘ಅಮೆರಿಕದ ಅಧ್ಯಕ್ಷರ ನೂತನ ಆದೇಶದ ಹಿನ್ನೆಲೆಯಲ್ಲಿ, 2020ರ ಉಳಿಕೆ ಅವಧಿಯಲ್ಲಿ 5,25,000 ಉದ್ಯೋಗಗಳು ತೆರವುಗೊಳ್ಳುತ್ತವೆ’’ ಎಂದು ಕಾನ್ಫರೆನ್ಸ್ ಕಾಲ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟ್ವಿಟರ್, ಅಮೆಝಾನ್, ಗೂಗಲ್ ಕಂಪೆನಿಗಳಿಂದ ವಿರೋಧ:  ಅಮೆರಿಕ ಅಧ್ಯಕ್ಷರ ಈ ಆದೇಶ ದೂರದೃಷ್ಟಿಯಿಂದ ಕೂಡಿಲ್ಲ ಎಂದು ಅಮೆರಿಕದ ತಂತ್ರಜ್ಞಾನ ಕಂಪೆನಿಗಳಾದ ಟ್ವಿಟರ್ ಇಂಕ್ ಮತ್ತು ಅಮೆಝಾನ್.ಕಾಮ್ ಇಂಕ್ ಬಣ್ಣಿಸಿವೆ. ಕೊರೋನ ವೈರಸ್ ಸಾಂಕ್ರಾಮಿಕದಿಂದ ನೆಲಕಚ್ಚಿರುವ ಅಮೆರಿಕದ ಆರ್ಥಿಕತೆಯನ್ನು ಮೇಲೆತ್ತಲು ವಲಸಿಗ ತಂತ್ರಜ್ಞಾನಿ ಉದ್ಯೋಗಿಗಳು ಸಹಾಯಮಾಡಬಹುದಾಗಿದೆ ಎಂದು ಅವು ಅಭಿಪ್ರಾಯಪಟ್ಟಿವೆ.

ನನಗೆ ನಿರಾಶೆಯಾಗಿದೆ ಎಂಬುದಾಗಿ ಗೂಗಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ಟ್ವೀಟ್ ಮಾಡಿದ್ದಾರೆ. ‘‘ನಾವು ವಲಸಿಗರೊಂದಿಗೆ ನಿಲ್ಲುವುದನ್ನು ಮುಂದುವರಿಸುತ್ತೇವೆ ಹಾಗೂ ಅವಕಾಶವನ್ನು ಎಲ್ಲರಿಗೂ ವಿಸ್ತರಿಸಲು ಶ್ರಮಿಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News