ಬಾಬಾ ರಾಮದೇವ್‍ರ ಪತಂಜಲಿಯ ಔಷಧಿ ಏಳೇ ದಿನಗಳಲ್ಲಿ ಕೊರೋನ ಗುಣಪಡಿಸುತ್ತದೆಯಂತೆ!

Update: 2020-06-23 11:28 GMT

ಹರಿದ್ವಾರ್: ಏಳು ದಿನಗಳಲ್ಲಿ ಕೊರೋನವೈರಸ್ ಸೋಂಕಿತ ರೋಗಿಯನ್ನು ಗುಣಪಡಿಸುವ ಸಾಮರ್ಥ್ಯವಿದೆಯೆಂದು ಹೇಳಿಕೊಂಡು ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಆರ್ಯುವೇದೀಯ ಔಷಧಿ ಕಿಟ್ ಒಂದನ್ನು ಬಿಡುಗಡೆಗೊಳಿಸಿದೆ. ರೋಗಿಗಳಲ್ಲಿ ನಡೆಸಲಾದ ಕ್ಲಿನಿಕಲ್ ಪ್ರಯೋಗಗಳಲ್ಲಿ ಈ ಔಷಧಿ ಶೇ. 100ರಷ್ಟು ಪೂರಕ ಫಲಿತಾಂಶ ಒದಗಿಸಿದೆ ಎಂದು ಪತಂಜಲಿ ಹೇಳಿಕೊಂಡಿದೆ.

ಕೊರೋನಿಲ್ ಮತ್ತು ಸ್ವಸರಿ ಎಂಬ ಹೆಸರಿನ ಈ ಔಷಧಿಗಳನ್ನು ದೇಶಾದ್ಯಂತ 280 ರೋಗಿಗಳ ಮೇಲೆ ಪ್ರಯೋಗ ಮಾಡಿ ನಂತರ ವಿಸ್ತೃತ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.

"ಕೊರೋನ ಚಿಕಿತ್ಸೆಗಾಗಿ ಸೂಕ್ತ ಔಷಧಿಗಾಗಿ ಇಡೀ ದೇಶ ಹಾಗೂ ಜಗತ್ತು ಕಾದಿತ್ತು. ಪತಂಜಲಿ ಸಂಶೋಧನಾ ಕೇಂದ್ರ ಹಾಗೂ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್(ಎನ್‍ಐಎಂಎಸ್) ಜೈಪುರ್  ಸಹಯೋಗದೊಂದಿಗೆ ಈ ಔಷಧಿಯನ್ನು ತಯಾರಿಸಲಾಗಿದೆ ಎಂದು ಹೇಳಲು ಹೆಮ್ಮೆಯಿದೆ. ಈ ಔಷಧಿಯ  ಮೊದಲ ಕ್ಲಿನಿಕಲ್ ನಿಯಂತ್ರಿತ ಅಧ್ಯಯನ ದಿಲ್ಲಿ, ಅಹ್ಮದಾಬಾದ್, ಮುಂತಾದ ನಗರಗಳಲ್ಲಿ ನಡೆದಿತ್ತು. ಒಟ್ಟು 280 ರೋಗಿಗಳು ಭಾಗವಹಿಸಿದ್ದರು ಹಾಗೂ ಶೇ.100ರಷ್ಟು ಮಂದಿ ಗುಣಮುಖರಾಗಿದ್ದಾರೆ. ಕೊರೋನ ಸೋಂಕು ಮತ್ತು ಅದು ಉಂಟು ಮಾಡುವ ಸಮಸ್ಯೆಗಳನ್ನು ಈ ಔಷಧಿಯಿಂದ ನಿಯಂತ್ರಿಸಬಹುದು,'' ಎಂದು ಅವರು ಹೇಳಿಕೊಂಡರು.

ಜಗತ್ತಿನಾದ್ಯಂತ ಸಂಶೋಧಕರು ಕೋವಿಡ್-19ಗೆ ಲಸಿಕೆ ಸಂಶೋಧನೆಯಲ್ಲಿ ಇನ್ನೂ ಸಂಪೂರ್ಣ ಯಶಸ್ಸು ಸಾಧಿಸದೇ ಇರುವಾಗ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಕೂಡ ಪರ್ಯಾಯ ಚಿಕಿತ್ಸೆ ಕುರಿತು ಎಚ್ಚರಿಕೆಯ ಮಾತುಗಳನ್ನಾಡಿರುವಾಗ ಪತಂಜಲಿಯ ಈ ಹೊಸ ಉತ್ಪನ್ನಗಳ ಬಿಡುಗಡೆ ಸಾಕಷ್ಟು ಕುತೂಹಲ ಕೆರಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News