ನನ್ನ ಧೈರ್ಯದ ಮೂಲ ಅಂಬೇಡ್ಕರ್: ನಿರ್ದೇಶಕ ಪಾ.ರಂಜಿತ್

Update: 2020-06-23 13:13 GMT
ಫೈಲ್ ಚಿತ್ರ

ಹೊಸದಿಲ್ಲಿ,ಜೂ.23: ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ತನ್ನ ಪಾಲಿನ ಆದರ್ಶವಾಗಿದ್ದಾರೆ. ಇಂದು ಸಮಾಜದಲ್ಲಿನ ಜಾತಿ ತಾರತಮ್ಯಗಳಿಗೆ ಪ್ರತಿರೋಧವನ್ನು ತನ್ನ ಸಿನಿಮಾಗಳಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ತಾನು ತೋರಿಸುತ್ತಿದ್ದರೆ ಅದಕ್ಕೆ ಅಂಬೇಡ್ಕರ್ ಅವರೇ ಸ್ಫೂರ್ತಿಯಾಗಿದ್ದಾರೆ. ಅವರಿಂದಲೇ ತಾನು ಧೈರ್ಯವನ್ನು ಮೈಗೂಡಿಸಿಕೊಂಡಿದ್ದೇನೆ ಎಂದು ಖ್ಯಾತ ತಮಿಳು ನಿರ್ದೇಶಕ ಪಾ.ರಂಜಿತ್ ಹೇಳಿದ್ದಾರೆ.

 ದಲಿತರ ಪರವಾಗಿ ಮತ್ತು ದಲಿತರ ಸಮಸ್ಯೆಗಳ ಕುರಿತು ಹಲವಾರು ಸಿನಿಮಾಗಳು ಬಂದಿವೆ. ಆದರೆ ತಾನೊಬ್ಬ ದಲಿತ ಎಂದು ಹೆಮ್ಮೆಯಿಂದ ಹೇಳಿಕೊಂಡು ದಲಿತ ಅಸ್ಮಿತೆಯನ್ನು ಬಹಿರಂಗವಾಗಿ ಸಾರುವ ಮೂಲಕ ಸಿನೆಮಾಗಳನ್ನು ಮಾಡುತ್ತಿರುವರು ಪಾ.ರಂಜಿತ್. ತನ್ನ ಪ್ರತಿಭೆ,ನಿರ್ದೇಶನ ಕೌಶಲಕ್ಕಾಗಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನೀಕಾಂತರಂತಹ ಗಣ್ಯರಿಂದ ಬೆನ್ನು ತಟ್ಟಿಸಿಕೊಂಡಿರುವ ಪಾ.ರಂಜಿತ್ ಅವರಿಗಿನ್ನೂ ಕೇವಲ 37 ವರ್ಷ ವಯಸ್ಸು. ಅಷ್ಟಕ್ಕೂ ಕೆಲವರಿಗೆ ಅವರು ಯಾರೆಂದು ಗೊತ್ತಿರದಿದ್ದರೆ ರಜನೀಕಾಂತ್ ಅವರ ‘ಕಬಾಲಿ’ ಮತ್ತು ‘ಕಾಲಾ’ಚಿತ್ರಗಳ ನಿರ್ದೇಶಕರೇ ಈ ಪಾ.ರಂಜಿತ್. ಇತ್ತೀಚಿಗೆ ಸುದ್ದಿ ಜಾಲತಾಣ ‘thewire.in’ ಗೆ ನೀಡಿರುವ ವ್ಯಾಪಕ ಸಂದರ್ಶನದಲ್ಲಿ ಜಾತಿ ತಾರತಮ್ಯಕ್ಕೆ ಪ್ರತಿರೋಧ,ಅಮೆರಿಕದಲ್ಲಿಯ ಕಪ್ಪು ಸಾಂಸ್ಕೃತಿಕ ಅಭಿವ್ಯಕ್ತಿಯಿಂದ ಏನನ್ನು ಕಲಿಯಬಹುದು ಎನ್ನುವುದರ ಕುರಿತು ಮತ್ತು ತನ್ನ ಚಿತ್ರಗಳಲ್ಲಿನ ಸಾಂಕೇತಿಕತೆಗಳ ಬಗ್ಗೆ ಮಾತನಾಡಿದ್ದಾರೆ.

ಸಮಾಜದಲ್ಲಿ ನನ್ನ ಸ್ಥಾನ ಏನು ಎಂದು ತನ್ನನ್ನೇ ಪ್ರಶ್ನಿಸಿಕೊಂಡಿರುವ ಪಾ.ರಂಜಿತ್,‘ಇನ್ಯಾರಿಗಿಂತಲೂ ಹೆಚ್ಚಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನನಗೆ ಆದರ್ಶ ಪುರುಷರಾಗಿದ್ದಾರೆ. ಮಹಾತ್ಮಾ ಗಾಂಧೀಜಿ ಮತ್ತು ಕಾಂಗ್ರೆಸ್ ದಲಿತರ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎನ್ನುವುದು ಮನವರಿಕೆಯಾದಾಗ ಅವರಿಬ್ಬರನ್ನೂ ಅಂಬೇಡ್ಕರ್ ವಿರೋಧಿಸಿದ್ದರು. ಆದಾಗ್ಯೂ ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಶಾಸನ ಬದಲಾವಣೆಯ ಮಾರ್ಗಗಳನ್ನು ಸ್ವಾಗತಿಸಿದ್ದರು. ನಾನು ಸ್ಫೂರ್ತಿಗಾಗಿ ಅಂಬೇಡ್ಕರ್ ಅವರತ್ತ ನೋಡಿದಾಗ ನಾನು ನನ್ನ ಚಿತ್ರಗಳಿಗಾಗಿ ರೂಪಿಸುವ ಪಾತ್ರಗಳೆಲ್ಲ ಈಗಾಗಲೇ ದಲಿತ ಸಮುದಾಯದಲ್ಲಿವೆ ಎನ್ನುವುದು ನನಗೆ ಅರ್ಥವಾಗಿತ್ತು. ನನ್ನ ಸೋದರ ನನ್ನ ಗ್ರಾಮದಲ್ಲಿ ಕಾನೂನು ಕಾಲೇಜಿನ ಮೆಟ್ಟಿಲನ್ನೇರಿದ್ದ ಮೊದಲ ವ್ಯಕ್ತಿಯಾಗಿದ್ದ. ಬದಲಾವಣೆಗಳನ್ನು ತರಲು ಆತ ನೆರವಾಗಿದ್ದ ’ಎಂದು ಹೇಳಿದ್ದಾರೆ.

ಜಾತಿ ದಬ್ಬಾಳಿಕೆಯ ವಿರುದ್ಧ ಧ್ವನಿಯೆತ್ತಿರುವ,ಆದರೆ ಹಿಂಸಾಚಾರ ಕಥೆಯ ಪ್ರಧಾನ ಭಾಗವಾಗಿರುವ ಇತ್ತೀಚಿನ ಕೆಲವು ಮುಖ್ಯವಾಹಿನಿ ಚಿತ್ರಗಳ ಕುರಿತು ಮಾತನಾಡಿರುವ ಪಾ.ರಂಜಿತ್,‘ ಈ ಚಿತ್ರಗಳ ನಿರ್ದೇಶಕರ ಉದ್ದೇಶಗಳನ್ನು ನಾನು ಶಂಕಿಸುವುದಿಲ್ಲ. ಅವರು ದಲಿತ ಶೋಷಣೆಯ ಮೂಲಕ ಮಾತನಾಡಲು ಬಯಸಿದ್ದಂತಿದೆ. ಆದರೆ ಇಂತಹ ಚಿತ್ರವೊಂದು ಬಿಡುಗಡೆಗೊಂಡಾಗ ಅದರ ಬಗ್ಗೆ ಚರ್ಚೆಗಳು ನಡೆಯಬೇಕು. ನೀವು ನನ್ನ ಸಮುದಾಯಕ್ಕೆ ಆಗಿರುವ ಹಿಂಸೆಯನ್ನು ಚಿತ್ರಿಸುವುದಿಲ್ಲ,ಆದರೆ ಆ ಹಿಂಸೆಯ ವಿರುದ್ದ ಅವರು ಎದ್ದುನಿಂತಿದ್ದ ರೀತಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತೀರಿ. ಇದು ನೀವು ಮೌನವಾಗಿರಬೇಕು ಮತ್ತು ಇತರ ಯಾರೋ ಮಾತ್ರ ನಿಮ್ಮನ್ನು ರಕ್ಷಿಸುತ್ತಾರೆ ಎಂದು ಹೇಳುವ ರಾಜಕೀಯವನ್ನು ಹುಟ್ಟು ಹಾಕುತ್ತದೆ. ಓರ್ವ ನಿರ್ದೇಶಕನಾಗಿ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ರೇಖಿಸಲು ನಾನು ಬಯಸುವುದಿಲ್ಲ. ಸ್ಪಷ್ಟ ವಿವರಗಳೊಂದಿಗೆ ಅವುಗಳನ್ನು ಮರುಸೃಷ್ಟಿಸುವುದು ಹಿಂಸೆಯ ಇನ್ನೊಂದು ಪದರವಾಗುತ್ತದೆ. ಸಿನಿಮಾ ವೀಕ್ಷಕರಿಂದ ಭಾವನಾತ್ಮಕ ಪ್ರತಿಕ್ರಿಯೆ ಸೃಷ್ಟಿಸಲು ಇದೊಂದೇ ಮಾರ್ಗ ಎನ್ನುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.

 ತನ್ನ ’ಕಬಾಲಿ’ಚಿತ್ರದಲ್ಲಿ,ಬಹುಶಃ ಮುಖ್ಯವಾಹಿನಿ ತಮಿಳು ಸಿನಿಮಾದಲ್ಲಿಯೇ ಮೊದಲ ಬಾರಿಗೆ ಚಿನುಆ ಅಚೆಬೆ ಮತ್ತು ಮ್ಯಾಲ್ಕಂ ಎಕ್ಸ್ ಅವರ ಚಿತ್ರಗಳನ್ನು ಬಳಸಿಕೊಂಡಿದ್ದ ಪಾ.ರಂಜಿತ್,ಜನಾಂಗೀಯ ನ್ಯಾಯಕ್ಕಾಗಿ ಹೋರಾಟವು ಈಗಲೂ ಭಾರತದಲ್ಲಿ ಜಾತಿ ವಿರೋಧಿ ನಾಗರಿಕ ಹಕ್ಕುಗಳ ಹೋರಾಟಕ್ಕೆ ಸ್ಫೂರ್ತಿ ನೀಡುವುದೇ ಎಂಬ ಪ್ರಶ್ನೆಗೆ ಉತ್ತರಿಸುತ್ತ,‘ಜಾತಿ ಮತ್ತು ಜನಾಂಗೀಯ ದಮನಗಳು ಸಂಪೂರ್ಣವಾಗಿ ಒಂದೇ ರೀತಿಯ ಇತಿಹಾಸಗಳನ್ನು ಹೊಂದಿಲ್ಲವಾದರೂ ಅವುಗಳ ನಡುವೆ ಭಾರೀ ಹೋಲಿಕೆಯಿದೆ. ಬಾಲ್ಯದಲ್ಲಿ ನಾನೂ ಪ್ರತ್ಯೇಕತೆಯನ್ನು ಅನುಭವಿಸಿದ್ದೇನೆ. ನನ್ನಂತಹವರು ಅಂಗಡಿಯನ್ನು ಎದುರು ಬಾಗಿಲಿನಿಂದ ಪ್ರವೇಶಿಸುವುದಕ್ಕೆ ನಿಷೇಧವಿತ್ತು ಮತ್ತು ಅಂಗಡಿಯಾತ ನನ್ನ ಹಣವನ್ನು ಚಿಕ್ಕ ಕಡ್ಡಿಯ ಮೂಲಕ ಎತ್ತಿಕೊಳ್ಳುತ್ತಿದ್ದ. ಆಟಿಕೆಯೊಂದನ್ನು ಖರೀದಿಸುವ ಮುನ್ನ ಅದನ್ನು ಮುಟ್ಟಲು ಮತ್ತು ಪರೀಕ್ಷಿಸಲು ನನಗೆಂದೂ ಅವಕಾಶವಿರಲಿಲ್ಲ. ಕಪ್ಪು ಜನಾಂಗದವರ ಸಾಂಸ್ಕೃತಿಕ ನಿರ್ಮಾಣಗಳಿಂದ ಕಲಿತುಕೊಳ್ಳುವುದು ಬಹಳಷ್ಟಿದೆ. ತಮ್ಮ ಕರಿಯತನವನ್ನು ಸಂಭ್ರಮಿಸುವುದರಿಂದ ಹಿಡಿದು ತಮ್ಮ ಸಮುದಾಯಗಳನ್ನು ಕಾಡುವ ವಿಷಯಗಳ ಕುರಿತು ಮಾತನಾಡುವವರೆಗೆ ಅವರು ಎಲ್ಲವನ್ನೂ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಮುಖ್ಯವಾಹಿನಿಯಲ್ಲಿ ತಮ್ಮನ್ನು ಉನ್ನತ ವ್ಯಕ್ತಿಗಳನ್ನಾಗಿ ಅವರೇ ಸ್ವತಃ ರೂಪಿಸಿಕೊಂಡಿದ್ದಾರೆ. ಈ ಸಾಂಸ್ಕೃತಿಕ ವಿಜಯದ ಪರಿಣಾಮವು,ವಿಶೇಷವಾಗಿ ಸಂಗೀತಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣವಾಗಿದೆ,ಏಕೆಂದರೆ ಅದು ಜಾಗತಿಕ ಏಕತೆಯನ್ನು ಪೋಷಿಸುತ್ತದೆ. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಪ್ರತಿಭಟನೆಗೆ ಅಂತರರಾಷ್ಟ್ರೀಯ ಬೆಂಬಲವಿದೆ,ಬಿಳಿಯರೂ ಸಹ ಕರಿಯರಿಗೆ ಬೆಂಬಲವಾಗಿ ನಿಂತಿದ್ದಾರೆ. ಭಾರತದಲ್ಲಿ ಅದು ಸಂಗೀತ ಅಥವಾ ಸಿನಿಮಾ ಆಗಿರಲಿ,ಜಾತಿ ತಾರತಮ್ಯಕ್ಕೆ ಪ್ರಬಲವಾದ ಪ್ರತಿರೋಧವು ಮಾತ್ರ ಸಂಸ್ಕೃತಿಯ ಮೂಲಕ ಆ ಸಾಧನೆಯನ್ನು ಮಾಡಲು ಸಾಧ್ಯ ’ಎಂದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News