ಪರೀಕ್ಷಾ ಕೊಠಡಿಗಳಲ್ಲಿ ಮಾಸ್ಕ್ ಧರಿಸಲು ವಿನಾಯಿತಿ ಇರಲಿ

Update: 2020-06-23 18:43 GMT

ಮಾನ್ಯರೇ,

ಕೊರೋನ ವೈರಸ್ ಸೋಂಕು ತಡೆಗಟ್ಟಲು ಮಾಸ್ಕ್ ಧಾರಣೆ ಕಡ್ಡಾಯ ಮಾಡಿರುವುದು ಸ್ವಾಗತಾರ್ಹವೇ. ಆದರೆ ಮಾಸ್ಕನ್ನು ಬಹಳ ಹೊತ್ತು ಧರಿಸಿಕೊಂಡಿರುವುದು ಸ್ವಲ್ಪ ಕಷ್ಟ. ಅದೊಂದು ರೀತಿಯ ಅಡಚಣೆಯನ್ನೇ ಉಂಟು ಮಾಡುತ್ತಿರುತ್ತದೆ.

ಇದೀಗ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಬರುವುದು ಕಡ್ಡಾಯವಾಗಿದೆ. ಆದರೆ ಈ ಮಾಸ್ಕ್ ಧಾರಣೆ, ಪರೀಕ್ಷಾ ಕೊಠಡಿಗೆ ಹೋಗುವ ತನಕ ಕಡ್ಡಾಯವಾಗಿದ್ದರೆ ಸಾಕು. ಕೊಠಡಿ ಸೇರಿದ ನಂತರ ಮಾಸ್ಕನ್ನು ಮುಖದಿಂದ ತೆಗೆದಿರಿಸಿಡುವುದು ಒಳ್ಳೆಯದು. ಇಲ್ಲದಿದ್ದರೆ, ಮೂರು ಗಂಟೆಗಳ ಹೊತ್ತು ಪರೀಕ್ಷೆಯನ್ನು ಬರೆಯುತ್ತಿರುವಾಗ, ಈ ಮಾಸ್ಕ್ ಉಂಟುಮಾಡುವ ಅಡಚಣೆಯಿಂದ ವಿದ್ಯಾರ್ಥಿಯ ಏಕಾಗ್ರತೆಗೆ ಭಂಗ ಬರುತ್ತದೆ. ಮಾಸ್ಕ್ ಧರಿಸಿರುವಾಗ ಉಸಿರಾಡಲು ಕೂಡ ಸ್ವಲ್ಪ ತಡೆಯಾಗುವುದು ಸುಳ್ಳಲ್ಲ. ವಿದ್ಯಾರ್ಥಿಯ ಆರೋಗ್ಯದ ದೃಷ್ಟಿಯಿಂದಲೂ ಇದು ಅಗತ್ಯ.

ಹಾಗಾಗಿ ಪರೀಕ್ಷಾ ಕೊಠಡಿ ಸೇರಿದ ನಂತರ ವಿದ್ಯಾರ್ಥಿಗೆ ಮಾಸ್ಕನ್ನು ಮುಖದ ಮೇಲಿಂದ ತೆಗೆದಿಡಲು ಅವಕಾಶ ಕೊಡುವುದು ಒಳ್ಳೆಯದು. ಮೂಗಿನಿಂದ ಕೆಳಗೆ ಸರಿಸುವುದಾಗಲೀ, ಬಾಯಿಯನ್ನು ಮುಚ್ಚಿಡುವುದಾಗಲೀ ಅಗತ್ಯವಿಲ್ಲ. ಹೇಗೂ ಥರ್ಮಲ್ ಪರೀಕ್ಷೆ ನಡೆಸಿಯೇ ಒಳಗೆ ಬಿಡುವುದರಿಂದ ಮತ್ತು ಸುರಕ್ಷಿತ ಅಂತರವನ್ನು ಕೂಡ ಕಾಯ್ದುಕೊಳ್ಳುವುದರಿಂದ, ಪರೀಕ್ಷಾ ಕೊಠಡಿಯೊಳಗೆ ಮಾಸ್ಕ್ ಧಾರಣೆಯ ಅಗತ್ಯವಿರುವುದಿಲ್ಲ. ಪರೀಕ್ಷೆ ನಡೆಯುವುದು ಮುಖ್ಯ ಎಂದು ಭಾವಿಸಿ ಅದನ್ನು ನಡೆಸಲು ಹೊರಟಿರುವ ಇಲಾಖೆ, ವಿದ್ಯಾರ್ಥಿಗಳು ಸರಾಗವಾಗಿ ಮತ್ತು ಗಂಭೀರವಾಗಿ ಉತ್ತರ ಬರೆಯಲೂ ಅವಕಾಶ ಒದಗಿಸಬೇಕು. ಸೂಕ್ತ ಸೂಚನೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನೀಡಬೇಕು ಮತ್ತು ಅದನ್ನು ಪರೀಕ್ಷಾ ಮೇಲ್ವಿಚಾರಕರಿಗೆ ಮನದಟ್ಟು ಮಾಡಿಕೊಡಬೇಕು. ಇಲ್ಲದೇ ಹೋದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕೊಠಡಿ ಮೇಲ್ವಿಚಾರಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡುವ ಸಂಭವವಿದೆ.

Writer - ಕೆ.ಎಸ್. ಮಂಗಳೂರು

contributor

Editor - ಕೆ.ಎಸ್. ಮಂಗಳೂರು

contributor

Similar News