ನೆಕ್ಕಿಲಾಡಿ ಗ್ರಾ.ಪಂ. ವತಿಯಿಂದ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿಗೆ ಅಡ್ಡಿ : ಆರೋಪ

Update: 2020-06-25 12:45 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ವತಿಯಿಂದ ನಿರ್ಮಾಣವಾಗುತ್ತಿರುವ ಚರಂಡಿ ಕಾಮಗಾರಿಗೆ ವ್ಯಕ್ತಿಗಳಿಬ್ಬರು ಅಡ್ಡಿಪಡಿಸಿದ್ದಾರೆ ಎನ್ನಲಾದ ಘಟನೆ ತಾಳೆಹಿತ್ಲುವಿನಲ್ಲಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಗ್ರಾ.ಪಂ. ಪಿಡಿಒ ಅವರು ಈ ಬಗ್ಗೆ ಎಂಜಿನಿಯರ್ ಇಲಾಖೆಗೆ ಪತ್ರ ಬರೆದು, ಅವರ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಚರಂಡಿ ನಿರ್ವಹಣೆಗೆ ಮುಂದಾಗದ 34 ನೆಕ್ಕಿಲಾಡಿ ಗ್ರಾ.ಪಂ. ಈ ಬಾರಿ ಮಳೆಗಾಲ ಆರಂಭವಾದಾಗಲೇ ತನ್ನೆಲ್ಲಾ ವಾರ್ಡ್‍ಗಳಲ್ಲಿ ಚರಂಡಿಯ ಹೂಳು ತೆಗೆಯುವುದು ಹಾಗೂ ಅಗತ್ಯವಿರುವಲ್ಲಿ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಗೆ ಹೊರಟಿತ್ತು. ತಾಳೆಹಿತ್ಲು ಪರಿಸರದಲ್ಲಿ ಹೂಳು ತುಂಬಿ ಕಾಣದಾಗಿದ್ದ ಚರಂಡಿಯ ಹೂಳು ತೆಗೆಯುವ ಕೆಲಸ ಜೆಸಿಬಿಯ ಮೂಲಕ ನಡೆಸಲಾಗುತ್ತಿತ್ತು. ಆದರೆ ಅದಕ್ಕೆ ಸ್ಥಳೀಯರಾದ ಬಾಬು ಮೂಲ್ಯ ಹಾಗೂ ಶಿವಪ್ಪ ಮೂಲ್ಯ ಎಂಬರು ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾ ಪಂಚಾಯತ್ ರಸ್ತೆಯ ಬದಿ ಚರಂಡಿ ತೋಡುವುದರಿಂದ ನಮ್ಮ ಮನೆಗೆ ಹೋಗುವ ದಾರಿಯು ಹಾಳಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಚರಂಡಿ ತೋಡದಂತೆ ತಮ್ಮ ಬೈಕ್‍ಗಳನ್ನು ಅಡ್ಡ ತಂದಿರಿಸಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಅಲ್ಲಿಯ ಚರಂಡಿ ಕಾಮಗಾರಿ ಸ್ಥಗಿತಗೊಳಿಸಿ ಜೆಸಿಬಿಯವರು ತೆರಳಿದ್ದರು ಎಂದು ತಿಳಿದುಬಂದಿದೆ.

ಕೃಷಿ ನಾಶ: ತಾಳೆಹಿತ್ಲು ಪರಿಸರದ ಮಳೆ ನೀರೆಲ್ಲಾ ಈ ಚರಂಡಿಗೆ ಬಂದು ಸೇರುತ್ತಿದ್ದು, ಈ ಚರಂಡಿಯಲ್ಲಿ ರಭಸದಿಂದ ಹರಿಯುವ ಮಳೆ ನೀರು  ವ್ಯಕ್ತಿಯೋರ್ವರ ತೋಟದ ಮೂಲಕ ಸಾಗುತ್ತದೆ. ಆದ್ದರಿಂದ ಈ ಬಗ್ಗೆ ತೋಟದ ಮಾಲಕ ಅನಿಲ್ ಮೆನೇಜಸ್ ಎಂಬವರು ಗ್ರಾ.ಪಂ. ಹಾಗೂ ಗ್ರಾಮಕರಣಿಕರಿಗೆ ಈ ಬಗ್ಗೆ ಮನವಿ ನೀಡಿದ್ದು, ಗ್ರಾ.ಪಂ. ನಿರ್ಮಿಸಿದ ಚರಂಡಿ ಮೂಲಕ ಹರಿಯುವ ತಾಳೆಹಿತ್ಲು ಪರಿಸರದ ನೀರೆಲ್ಲಾ ತನ್ನ ತೋಟದ ಒಳಗೆ ಬಂದು ಅಲ್ಲಿಂದ ಮುಂದಕ್ಕೆ ಹರಿಯುತ್ತದೆ. ಗ್ರಾ.ಪಂ.ನವರು ವ್ಯವಸ್ಥಿತವಾಗಿ ಚರಂಡಿ ತೋಡಿ ವ್ಯವಸ್ಥೆ ಮಾಡಬೇಕು. ಈಗ ಆಕ್ಷೇಪವಿರುವಲ್ಲಿ ಚರಂಡಿ ತೋಡದಿದ್ದರೆ ರಸ್ತೆಯಲ್ಲೆ ನೀರೆಲ್ಲಾ ಹರಡಿ ಕೆಳಗಿನ ಪ್ರದೇಶದಲ್ಲಿರುವ ತನ್ನ ಜಾಗಕ್ಕೆ ಮಳೆ ನೀರು ರಭಸವಾಗಿ ಬೀಳುವುದರಿಂದ ನನ್ನ ಜಾಗವು ಕುಸಿತಕ್ಕೊಳಗಾಗುತ್ತಿದೆ. ಅಲ್ಲದೇ ಕೃಷಿ ನಾಶಕ್ಕೂ ಕಾರಣವಾಗುತ್ತಿದೆ. ಆದ್ದರಿಂದ ವ್ಯವಸ್ಥಿತವಾಗಿ ಚರಂಡಿ ಮಾಡಬೇಕು ಎಂದು ತಿಳಿಸಿದ್ದರು.

ಈ ಬಗ್ಗೆ ಜೂ. 25ರಂದು ಗ್ರಾ.ಪಂ. ಪಿಡಿಒ ಜಯಪ್ರಕಾಶ್ ಹಾಗೂ ಗ್ರಾಮಕರಣಿಕ ರಮಾನಂದ ಚಕ್ಕಡಿ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದು, ಬಳಿಕ ಗ್ರಾ.ಪಂ. ಪಿಡಿಒ ಅವರು ಚರಂಡಿ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಗ್ರಾ.ಪಂ. ಮೋರಿ ಹಾಕಿ ಕೊಡುವುದಿದ್ದರೆ ಚರಂಡಿ ತೋಡಲು ಬಿಡುವುದಾಗಿ ಅವರು ತಿಳಿಸಿದರು. ಆಗ ಪಿಡಿಒ ಜಯಪ್ರಕಾಶ್ ಮಾತನಾಡಿ, ಖಾಸಗಿ ರಸ್ತೆಗೆ ಗ್ರಾ.ಪಂ. ಮೋರಿ ಹಾಕಿ ಕೊಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಖಾಸಗಿ ರಸ್ತೆಗೆ ಅವರವರೇ ತಂದು ಮೋರಿ ಅಳವಡಿಸಬೇಕು. ಗ್ರಾ.ಪಂ.ನಲ್ಲಿ ಎಲ್ಲರಿಗೂ ಸಮಾನ ನ್ಯಾಯ. ಬೇರೆ ಕಡೆಯೆಲ್ಲ ಖಾಸಗಿ ರಸ್ತೆಗೆ ಖಾಸಗಿಯವರೇ ಮೋರಿಯನ್ನು ತಂದು ಅಳವಡಿಸಿದ್ದಾರೆ. ಆದ್ದರಿಂದ ಇಲ್ಲಿ ಚರಂಡಿ ನಿರ್ಮಾಣಕ್ಕೆ ತಡೆಯೊಡ್ಡಬಾರದು ಎಂದರು. ಇದಕ್ಕೆ ನಿರಾಕರಿಸಿದ ಕಾರಣ ಈ ಬಗ್ಗೆ ಎಂಜಿನಿಯರ್ ಇಲಾಖೆಗೆ ಪತ್ರ ಬರೆದು, ಅವರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News