ಸ್ವರ್ಣ ನದಿ ಅಕ್ರಮ ಮರಳು ಸಾಗಾಟ ಪ್ರಕರಣ: ದಾಸ್ತಾನು ಇರಿಸಿದ್ದ ಮರಳು ಮತ್ತೆ ಕಳವು: ಟೆಂಪೋ ವಶ

Update: 2020-06-25 16:30 GMT

ಹಿರಿಯಡ್ಕ, ಜೂ. 25: ಶಿರೂರು ಗ್ರಾಮದ ಸ್ವರ್ಣ ನದಿಯ ಬಜೆ ಡ್ಯಾಂ ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡು ದಾಸ್ತಾನು ಇರಿಸಿದ್ದ 70 ಮೆಟ್ರಿಕ್ ಟನ್ ಮರಳಿನ ಪೈಕಿ, 20 ಮೆಟ್ರಿಕ್ ಟನ್ ಮರಳನ್ನು ಮತ್ತೆ ಅಕ್ರಮವಾಗಿ ಸಾಗಾಟ ಮಾಡಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಜೆ ಡ್ಯಾಂ ವ್ಯಾಪ್ತಿಯ ಸ್ವರ್ಣ ನದಿಯಲ್ಲಿ ಅನಧಿಕೃತವಾಗಿ ಹೂಳೆತ್ತಿದ ಸುಮಾರು 70 ಮೆಟ್ರಿಕ್ ಟನ್ ಮರಳು, ಹೂಳನ್ನು 41 ಶಿರೂರು ಗ್ರಾಮದ ಜಾಗದಲ್ಲಿ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಇಲಾಖೆಯ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ಮೇ 16ರಂದು ಸಂಜೆ ವೇಳೆ ದಾಳಿ ಮಾಡಿ, ಸ್ವರ್ಣ ನದಿಯಲ್ಲಿ ಹೂಳೆತ್ತಲು ಟೆಂಡರ್ ಹೊಂದಿರುವ ಯೋಜಕಾ ಇಂಡಿಯಾ ಪ್ರೈ.ಲಿ. ಇದರ ಪ್ರತಿನಿಧಿಗಳಾದ ದಯಾನಂದ ಮಲ್ಯ ಹಾಗೂ ಅಶೋಕ ಜೋಗಿ ವಿರುದ್ಧ ಉಡುಪಿಯ ಪಿಸಿಎ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಈ ವೇಳೆ ಸ್ವಾಧೀನಪಡಿಸಿಕೊಂಡ ಮರಳು ಮಿಶ್ರಿತ ಗೊಜ್ಜು ಹಾಗೂ ಪೆಬೆಲ್ಸ್ ಮಣ್ಣು, ಮರಳು ಮಿಶ್ರಿತ ಹೂಳನ್ನು ವಿಲೇವಾರಿ ಆಗುವವರೆಗೆ ಸಾಗಾಟ ಮಾಡುವುದಿಲ್ಲ ಮತ್ತು ಹೂಳನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳು ವುದಾಗಿ ದಯಾನಂದ ಮಲ್ಯ ಹಾಗೂ ಅಶೋಕ ಜೋಗಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು.

ಜೂ.24ರಂದು ಹಿರಿಯ ಭೂ ವಿಜ್ಞಾನಿ, ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಪಿಡಿಒ, ಗ್ರಾಮಕರಣಿಕರೊಂದಿಗೆ ಸ್ಥಳ ಪರಿಶೀಲನೆ ಮಾಡಿ ದಾಗ ಇಲ್ಲಿನ ಸುಮಾರು 8,000 ರೂ. ಮೌಲ್ಯದ 20 ಮೆಟ್ರಿಕ್ ಟನ್ ನಷ್ಟು ಸ್ವಾಧೀನ ಪಡಿಸಿದ ಹೂಳನ್ನು ದಯಾನಂದ ಮಲ್ಯ ಹಾಗೂ ಅಶೋಕ ಜೋಗಿ ಹಾಗೂ ಇತರರು ಸೇರಿ ಕಳ್ಳತನ ಮಾಡಿ ಸಾಗಾಟ ಮಾಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರೆಡ್ ಹ್ಯಾಂಡ್ ಆಗಿ ಸಿಕ್ಕಿದರು !

ಜೂ.24ರಂದು ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದಾಗ ಮರಳು ಕಳವು ಆಗಿರುವುದು ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಗೌತಮ್ ಶಾಸ್ತ್ರಿ ಇಂದು ಹಿರಿಯಡ್ಕ ಠಾಣೆಗೆ ದೂರು ನೀಡಲು ಹೋಗಿದ್ದರು. ಅಲ್ಲಿಂದ ಅವರು ಪೊಲೀಸರ ಜೊತೆ ಪರಿಶೀಲನೆ ನಡೆಸಲು ಮತ್ತೆ ಸ್ಥಳಕ್ಕೆ ತೆರಳಿದರು. ಆಗ ಅಲ್ಲಿ ದಾಸ್ತಾನು ಇರಿಸಲಾದ ಮರಳನ್ನು ಅಕ್ರಮವಾಗಿ ಟೆಂಪೋದಲ್ಲಿ ತುಂಬಿಸುತ್ತಿರುವುದು ಕಂಡುಬಂತು. ಕೂಡಲೇ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು, ಪೊಲೀಸರು ಟೆಂಪೋವನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News