ಪರ್ಕಳ: ಮುಕ್ತಿ ಕಾಣದ ಹೆದ್ದಾರಿ ಸಮಸ್ಯೆ

Update: 2020-06-25 17:01 GMT

ಪರ್ಕಳ, ಜೂ.25: ಪರ್ಕಳದಲ್ಲಿ ನಡೆದಿರುವ ರಾಷ್ಟ್ರೀಯ ಹೆದ್ದಾರಿ 169 (ಎ) ಕಾಮಗಾರಿ ಸ್ಥಳೀಯ ಜನರ ಪಾಲಿಗೆ ಮುಕ್ತಿಯೇ ಕಾಣದ ನಿರಂತರ ಸಮಸ್ಯೆಯಾಗಿ ಕಾಡುತ್ತಿದೆ.

ಬಸ್ ನಿಲ್ದಾಣದಲ್ಲಿರುವ ನೀರು ಸರಬರಾಜಿನ ಚೇಂಬರನ್ನು ದುರಸ್ತಿಗಾಗಿ ಒಂದು ವಾರದಿಂದ ತೆರೆದಿಡಲಾಗಿದ್ದು, ಇಕ್ಕಟ್ಟಾದ ಮಾರ್ಗ ಮತ್ತಷ್ಟು ಕುಗ್ಗುವ ಮೂಲಕ ರಸ್ತೆ ತಡೆ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಇದರಿಂದ ಪ್ರತಿದಿನವೂ ಕಿ.ಮೀ. ಉದ್ದದ ವಾಹನಗಳ ಸರತಿ ಸಾಲನ್ನು ಇಲ್ಲಿ ಕಾಣಬಹುದಾಗಿದೆ. ಇಂದು ಬೆಳಗಿನ ವೇಳೆ ಸುಮಾರು ಮುಕ್ಕಾಲು ಗಂಟೆಯಷ್ಟು ಸಮಯ ಉಂಟಾದ ತಡೆಯಲ್ಲಿ ಇಂದು ಪ್ರಾರಂಭಗೊಂಡ ಎಸೆಸೆಲ್ಸಿ ಪರೀಕ್ಷೆಗೆ ತೆರಳುವ ಹಲವಾರು ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ತೆರಳುವ ಶಿಕ್ಷಕರು ಸಿಕ್ಕಿಬಿದ್ದಿದ್ದು, ಕೊರೋನಾ ಆತಂಕದ ಜತೆಗೆ ಇನ್ನಷ್ಟು ಆತಂಕವನ್ನು ಮೈಗೂಡಿಸಿ ಕೊಂಡು ಪರೀಕ್ಷಾ ಕೇಂದ್ರದತ್ತ ತೆರಳುವಂತಾಗಿತ್ತು.

ಜೊತೆಗೆ ಒಂದೆರೆಡು ಅಂಬ್ಯುಲೆನ್ಸ್‌ಗಳೂ ಈ ಸರತಿ ಸಾಲಿನಲ್ಲಿ ಸಿಕ್ಕಿ ಬಿದ್ದಿದ್ದವು. ಪ್ರತಿದಿನ ಕೆಲಸಕ್ಕೆ ತೆರಳುವ ನೂರಾರು ಮಂದಿಯೂ ಇಲ್ಲಿ ತೊಂದರೆ ಅನುಭವಿಸುವಂತಾಗಿತ್ತು. ಜನರನ್ನು ಈ ರೀತಿಯ ತೊಂದರೆಯಲ್ಲಿ ಸಿಲುಕಿಸುವ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದುರಸ್ತಿ ಕೆಲಸವನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಬೇಕೆಂದು ಬವಣೆಗೊಳಗಾಗಿರುವ ಪ್ರಯಾಣಿಕರು ಅಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News