×
Ad

ಯೂರೋಪ್‌ನಿಂದ ಸೇನೆ ತೆರವಿನ ಹಿಂದಿನ ಕಾರ್ಯತಂತ್ರ ಬಹಿರಂಗಪಡಿಸಿದ ಅಮೆರಿಕ

Update: 2020-06-26 09:39 IST

ಹೊಸದಿಲ್ಲಿ, ಜೂ.26: ಭಾರತ ಹಾಗೂ ಆಗ್ನೇಯ ಏಷ್ಯಾಗೆ ಚೀನಾದಿಂದ ಎದುರಾಗಿರುವ ಅಪಾಯವನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಯೂರೋಪ್‌ನಿಂದ ಅಮೆರಿಕ ಸೇನೆಯನ್ನು ಕಡಿತಗೊಳಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮೈಕ್ ಪೊಂಪೆಯೊ ಹೇಳಿದ್ದಾರೆ.

 ಈ ಮೂಲಕ ಭಾರತ- ಚೀನಾ ಗಡಿವಿವಾದದಲ್ಲಿ ಪರೋಕ್ಷವಾಗಿ ತನ್ನ ಹಸ್ತಕ್ಷೇಪದ ಸುಳಿವು ನೀಡಿದೆ. ಜರ್ಮನಿಯಿಂದ ಸೇನೆಯನ್ನು ಹಿಂಪಡೆಯಲು ನಿರ್ಧರಿಸಿರುವುದು ಯೋಜನಾಬದ್ಧ ಕಾರ್ಯತಂತ್ರದ ಅಂಗ. ಏಕೆಂದರೆ ಇದನ್ನು ಇತರ ಕಡೆಗಳಿಗೆ ರವಾನೆ ಮಾಡಬೇಕಾಗುತ್ತದೆ ಎಂದು ಬ್ರುಸ್ಸೆಲ್ಸ್ ಫೋರಂನಲ್ಲಿ ಮಾತನಾಡಿದ ಪೊಂಪೆಯೊ ಬಹಿರಂಗಪಡಿಸಿದರು. ಜರ್ಮನಿಯಿಂದ ಸೇನೆ ಕಡಿತಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ಇತ್ತೀಚೆಗೆ ಯೂರೋಪಿಯನ್ ಯೂನಿಯನ್ ದೇಶಗಳನ್ನು ಕೆರಳಿಸಿತ್ತು.

ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಕ್ರಮಗಳಿಂದ ಭಾರತ ಹಾಗೂ ವಿಯೇಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೀನ್ಸ್ ಮತ್ತು ದಕ್ಷಿಣ ಚೀನಾ ಸಮುದ್ರಕ್ಕೆ ಅಪಾಯವಿದೆ. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸಮರ್ಪಕವಾಗಿ ಎದುರಿಸಬೇಕಾಗಿದೆ. ಇದು ನಮ್ಮ ಕಾಲಘಟ್ಟದ ಸವಾಲು ಹಾಗೂ ಅದಕ್ಕಾಗಿ ಸಂಪನ್ಮೂಲಗಳನ್ನು ನಿಯೋಜಿಸುವುದನ್ನು ನಾವು ಖಾತರಿಪಡಿಸಬೇಕಾಗಿದೆ ಎಂದು ಪೊಂಪೆಯೊ ವಿವರಿಸಿದ್ದಾರೆ.

ಚೀನಾದ ಕ್ರಮಗಳ ಬಗ್ಗೆ ವಿವರ ನೀಡಿದ ಪೊಂಪೆಯೊ, ಭಾರತದ ಜತೆಗಿನ ಗಡಿಯಲ್ಲಿ ಸಂಘರ್ಷ, ದಕ್ಷಿಣ ಚೀನಾ ಸಮುದ್ರದಲ್ಲಿನ ಚಟುವಟಿಕೆಗಳು ಹಾಗೂ ಆರ್ಥಿಕ ನೀತಿಗಳನ್ನು ಉದಾಹರಿಸಿದರು. ಚೀನಾದ ಕ್ರಮಗಳ ಬಗ್ಗೆ ಮತ್ತು ಎದುರಾಗಿರುವ ಸವಾಲುಗಳ ಬಗ್ಗೆ ಅಮೆರಿಕ ಹಾಗೂ ಯೂರೋಪಿಯನ್ ಒಕ್ಕೂಟ ದೇಶಗಳು ಚರ್ಚೆ ನಡೆಸಲಿವೆ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News