ಲಾದೆನ್‌ನನ್ನು ಹುತಾತ್ಮ ಎಂದು ಕರೆದ ಪಾಕ್ ಪ್ರಧಾನಿ!
ಇಸ್ಲಾಮಾಬಾದ್, ಜೂ.26: ಅಮೆರಿಕದ ಮೇಲೆ ನಡೆದ 9/11 ದಾಳಿಯ ಸೂತ್ರಧಾರ ಒಸಾಮಾ ಬಿನ್ ಲಾದೆನ್ ನನ್ನು ಶಹೀದ್ (ಹುತಾತ್ಮ) ಎಂದು ಕರೆಯುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅಮೆರಿಕದ ನೌಕಾಪಡೆ 2011ರಲ್ಲಿ ಆತನನ್ನು ಪಾಕಿಸ್ತಾನಿ ನೆಲದಲ್ಲಿ ಹತ್ಯೆ ಮಾಡುವ ಮೂಲಕ ದೇಶಕ್ಕೆ ಮುಜುಗರ ಉಂಟು ಮಾಡಿದೆ ಎಂದು ಇಮ್ರಾನ್ ಖಾನ್ ಬಣ್ಣಿಸಿದ್ದಾರೆ.
ತಮ್ಮ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಖಾನ್, ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಅಮೆರಿಕವನ್ನು ಬೆಂಬಲಿಸಿದ ಹೊರತಾಗಿಯೂ ಪಾಕಿಸ್ತಾನ ಈ ಹಿಂದೆ ತೀವ್ರ ಮುಖಭಂಗ ಎದುರಿಸಿದೆ. ಬಳಿಕ ಅಪ್ಘಾನಿಸ್ತಾನದಲ್ಲಿ ಅಮೆರಿಕದ ವೈಫಲ್ಯಕ್ಕೆ ಪಾಕಿಸ್ತಾನವನ್ನು ದೂಷಿಸಲಾಗಿದೆ ಎಂದು ಕಿಡಿ ಕಾರಿದ್ದಾರೆ.
ಪಾಕಿಸ್ತಾನದ ಅಬೋಟಾಬಾದ್‌ನ ಗ್ಯಾರಿಸನ್ ಟೌನ್‌ನಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾದೆನ್ ನನ್ನು ಅಮೆರಿಕ ಹತ್ಯೆ ಮಾಡಿದ್ದನ್ನು ನೆನಪಿಸಿಕೊಂಡ ಇಮ್ರಾನ್, ‘‘ಅಮೆರಿಕನ್ನರು ಅಬೋಟಾಬಾದ್‌ಗೆ ಆಗಮಿಸಿ ಹುತಾತ್ಮ ಒಸಾಮಾ ಬಿಲ್ ಲಾದೆನ್ ನನ್ನು ಹತ್ಯೆ ಮಾಡಿತು. ಆ ಬಳಿಕ ಏನಾಯಿತು? ಇಡೀ ವಿಶ್ವ ನಮ್ಮನ್ನು ಶಪಿಸಿತು ಮತ್ತು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿತು’’ ಎಂದು ಹೇಳಿದರು.
ನಮ್ಮ ಮಿತ್ರದೇಶ (ಅಮೆರಿಕ) ನಮ್ಮ ದೇಶಕ್ಕೆ ಕೆಲವರನ್ನು ಹತ್ಯೆ ಮಾಡಲು ಆಗಮಿಸಿ, ನಮಗೂ ಮಾಹಿತಿ ನೀಡಲಿಲ್ಲ. ಅವರ ಯುದ್ಧದಲ್ಲಿ 70 ಸಾವಿರ ಮಂದಿ ಪಾಕಿಸ್ತಾನಿಯರು ಬಲಿಯಾದರು. ಜತೆಗಿದ್ದ ಎಲ್ಲ ಪಾಕಿಸ್ತಾನಿಯರಿಗೆ ಆಗಿರುವ ಅವಮಾನವನ್ನು ನೋಡಿ’ ಎಂದು ಸದನದಲ್ಲಿ ಇಮ್ರಾನ್ ವಿವರಿಸಿದರು.