ದಿಲ್ಲಿ ಹಿಂಸಾಚಾರ: 7 ಜನರ ವಿರುದ್ಧ ಆರೋಪಪಟ್ಟಿ

Update: 2020-06-26 14:59 GMT

ಹೊಸದಿಲ್ಲಿ, ಜೂ.26: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ನಡೆದಿದ್ದ ಹಿಂಸಾಚಾರದ ಸಂದರ್ಭ ಸ್ಥಳೀಯ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಗುರುವಾರ 7 ಜನರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದಾರೆ.

ಫೆಬ್ರವರಿ 25ರಂದು ನಡೆದಿದ್ದ ಹಿಂಸಾಚಾರ ಸಂದರ್ಭ 22 ವರ್ಷದ ಮೋನಿಸ್ ಎಂಬಾತ ತಲೆಗೆ ಏಟು ಬಿದ್ದು ಮೃತಪಟ್ಟಿದ್ದ ಪ್ರಕರಣ ಇದಾಗಿದ್ದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ದಿಲ್ಲಿಯ ಕ್ರೈಂಬ್ರಾಂಚ್ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ . ಆರೋಪಿಗಳ ಬಳಿಯಿದ್ದ ಲಾಠಿ, ದೊಣ್ಣೆ, ತಲ್ವಾರ್‌ಗಳನ್ನು ಹಾಗೂ ಮೃತ ಮೋನಿಸ್‌ನ ಮೊಬೈಲ್ ಫೋನ್ ಕೂಡಾ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

ಕೂಲಿ ಕಾರ್ಮಿಕನಾಗಿದ್ದ ಮೋನಿಸ್ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಉದ್ರಿಕ್ತ ಗುಂಪು ಆತನ ಮೇಲೆ ಹಲ್ಲೆ ನಡೆಸಿತ್ತು. ಪ್ರಕರಣದ ಇನ್ನಿತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ. ಐಪಿಸಿಯ 147, 148, 149, 327, 436, 302, 120 ಬಿ ಸೆಕ್ಷನ್‌ಗಳಡಿ ಆರೋಪಪಟ್ಟಿ ದಾಖಲಿಸಲಾಗಿದ್ದು ಗರಿಷ್ಟ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News