ಜುಲೈ 15ರೊಳಗೆ ಸಿಬಿಎಸ್‌ಇ ಫಲಿತಾಂಶ

Update: 2020-06-26 15:15 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.15: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು  10 ಹಾಗೂ 12ನೇ ತರಗತಿಗಳ ಪರೀಕ್ಷಾ ಫಲಿತಾಂಶಗಳನ್ನು ಜುಲೈ 15ರೊಳಗೆ ಪ್ರಕಟಿಸಲಿದೆಯೆಂದು ಮಂಡಳಿಯ ಪರೀಕ್ಷಾ ನಿಯಂತ್ರಣಕಾರ ಸನ್ಯಾಮ್ ಭಾರಧ್ವಜ್ ಶುಕ್ರವಾರ ಘೋಷಿಸಿದ್ದಾರೆ.

  ವಿದ್ಯಾರ್ಥಿಗಳು ತಮ್ಮ ಅಂಕಗಳಿಕೆಯಲ್ಲಿ ಸುಧಾರಣೆ ಮಾಡಲು ಇಚ್ಛಿಕವಾಗಿ ಪರೀಕ್ಷೆಗಳಿಗೆ ಬರೆಯಲು ಅವಕಾಶ ನೀಡಲಾಗುವದು. ಒಂದು ವೇಳೆ 12ನೇ ತರಗತಿಯ ವಿದ್ಯಾರ್ಥಿಗಳು ಐಚ್ಛಿಕ (ಒಪ್ಶನಲ್) ಪರೀಕ್ಷೆಗಳಿಗೆ ಹಾಜರಾದಲ್ಲಿ, ಅದರಲ್ಲಿ ಗಳಿಸಿದ ಮಾರ್ಕುಗಳನ್ನು ಅಂತಿಮ ಅಂಕಗಳೆಂದು ಪರಿಗಣಿಸಲಾಗು ವುದೆಂದು ಅವರು ತಿಳಿಸಿದ್ದಾರೆ.

 ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ಹಿನ್ನೆಲೆಯಲ್ಲಿ 10 ಹಾಗೂ 12ನೇ ತರಗತಿಗೆ ಬಾಕಿಯುಳಿದಿರುವ ಪರೀಕ್ಷೆಗಳನ್ನು ರದ್ದುಪಡಿಸಲು ಸುಪ್ರೀಂಕೋರ್ಟ್, ಕೇಂದ್ರ ಸರಕಾರ ಹಾಗೂ ಸಿಬಿಎಸ್‌ಇಗೆ ಅನುಮತಿ ನೀಡಿದೆ. ರದ್ದುಪಡಿಸಲಾದ ಪರೀಕ್ಷೆಗಳ ಅಂಕಗಳನ್ನು, ಹಿಂದಿನ ಮೂರು ಅಂತರಿಕ ಪರೀಕ್ಷೆಗಳ ಆಧಾರದಲ್ಲಿ ನೀಡುವ ಸಿಬಿಎಸ್‌ಇನ ಯೋಜನೆಗೂ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ.

 10 ಹಾಗೂ 12ನೇ ತರಗತಿಯ ಫಲಿತಾಂಶಗಳನ್ನು ಜುಲೈ ತಿಂಗಳ ಮಧ್ಯದೊಳಗೆ ಪ್ರಕಟಿಸುವುದಾಗಿ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಬುಧವಾರ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ.

ಬಾಕಿಯುಳಿದಿರುವ ಪರೀಕ್ಷೆಗಳನ್ನು ರದ್ದುಪಡಿಸುವ ಕುರಿತ ಅಧಿಸೂಚನೆಯನ್ನು ಹೊರಡಿಸಲು ಸಿಬಿಎಸ್‌ಗೆ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಅನುಮತಿ ನೀಡಿದೆ.

 ಜುಲೈ 1ರಿಂದ 15ರವರೆಗೆ ನಡೆಯಲಿದ್ದ 10 ಹಾಗೂ 12 ತರಗತಿಗಳಿಗೆ ಬಾಕಿಯುಳಿದಿದ್ದ ಪರೀಕ್ಷೆಗಳನ್ನು ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ರದ್ದುಪಡಿಸಬೇಕೆಂದು ಕೋರಿ ಸಿಬಿಎಸ್‌ಇ ಮನವಿ ಸಲ್ಲಿಸಿತ್ತು ಹಾಗೂ ಐಸಿಎಸ್‌ಇ (ಇಂಡಿಯನ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್) ಕೂಡಾ ಇದೇ ರೀತಿಯ ಮನವಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News