ಪಿಎಸ್‌ಎ ಕಾಯ್ದೆಯಡಿ ಬಂಧನ ಪ್ರಶ್ನಿಸಿದ ಅರ್ಜಿ: ಜಮ್ಮು-ಕಾಶ್ಮೀರ ಆಡಳಿತಕ್ಕೆ ಸುಪ್ರೀಂ ನೋಟಿಸ್

Update: 2020-06-26 15:17 GMT

ಹೊಸದಿಲ್ಲಿ, ಜೂ.26: ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್‌ಎ)ಯಡಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಮ್ಮು-ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಿಯಾನ್ ಅಬ್ದುಲ್ ಖಯ್ಯೂಮ್ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಶುಕ್ರವಾರ ಜಮ್ಮು ಕಾಶ್ಮೀರ ಆಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ. 2019ರ ಆಗಸ್ಟ್ 4ರ ಮಧ್ಯರಾತ್ರಿ (ಜಮ್ಮು -ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸುವ ನಿರ್ಧಾರ ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು ) ಪೊಲೀಸರು ಅಬ್ದುಲ್ ಖಯ್ಯೂಮ್‌ರನ್ನು ಪಿಎಸ್‌ಎ ಕಾಯ್ದೆಯಡಿ ಬಂಧಿಸಿ ಆಗ್ರಾದ ಜೈಲಿನಲ್ಲಿ ಇರಿಸಿದ್ದರು. ಬಳಿಕ ಅವರನ್ನು ದಿಲ್ಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಪಿಎಸ್‌ಎ ಯಡಿ ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸದೆ 3 ವರ್ಷ ಬಂಧನಲ್ಲಿಡಲು ಅವಕಾಶವಿದೆ. ಪಿಎಸ್‌ಎ ಯಡಿ ಬಂಧನವನ್ನು ಪ್ರಶ್ನಿಸಿ ಖಯ್ಯೂಮ್ ಸಲ್ಲಿಸಿದ್ದ ಅರ್ಜಿಯನ್ನು ಮೇ 28ರಂದು ಹೈಕೋರ್ಟ್ ತಳ್ಳಿಹಾಕಿತ್ತು.

ತಮ್ಮ ಪ್ರತ್ಯೇಕತಾವಾದಿ ಸಿದ್ಧಾಂತವನ್ನು ನಡವಳಿಕೆಯ ಮೂಲಕ ಘೋಷಿಸಿ ಸಾಬೀತುಪಡಿಸುವಂತೆ ಹೈಕೋರ್ಟ್ ಈ ಸಂದರ್ಭ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಖಯ್ಯೂಮ್, ತನ್ನನ್ನು ಪೂರ್ವಸೂಚನೆಯಿಲ್ಲದೆ ಬಂಧಿಸಿ ಆಗ್ರಾಕ್ಕೆ ಕರೆದೊಯ್ಯಲಾಗಿದೆ ಮತ್ತು ಏಕಾಂತ ಬಂಧನದಲ್ಲಿಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. 2008 ಮತ್ತು 2010ರಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಆಧಾರದಲ್ಲಿ ಬಂಧಿಸಲಾಗಿದೆ. ಆದರೆ ಈ ಎಫ್‌ಐಆರ್‌ಗಳು ಹಳೆಯದಾಗಿದ್ದು ಈಗ ಅಪ್ರಸ್ತುತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಖಯ್ಯೂಮ್ ಅವರ ಇಳಿವಯಸ್ಸು ಮತ್ತು ಹೆಚ್ಚುತ್ತಿರುವ ಕೊರೋನ ಸೋಂಕನ್ನು ಗಮನಿಸಿ ಅವರನ್ನು ಬಿಡುಗಡೆ ಮಾಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಆಡಳಿತಕ್ಕೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್, ಖಯ್ಯೂಮ್‌ರಿಗೆ ಚಳಿಗಾಲದಲ್ಲಿ ಧರಿಸುವ ಬಟ್ಟೆಗಳನ್ನು ತಕ್ಷಣ ಒದಗಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News