‘ಮೋದಿಯವರೇ ಹೆದರಬೇಡಿ, ಸತ್ಯ ಹೇಳಿ’: ಪ್ರಧಾನಿಗೆ ರಾಹುಲ್ ಗಾಂಧಿ ಸಂದೇಶ

Update: 2020-06-26 17:25 GMT

ಹೊಸದಿಲ್ಲಿ: ಲಡಾಖ್ ನಲ್ಲಿ ಚೀನಿ ಸೇನೆಯ ಜೊತೆಗಿನ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ನಂತರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚೀನಾವು ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆಯೇ ಎನ್ನುವ ಬಗ್ಗೆ ಪ್ರಧಾನಿಯವರು ‘ಹೆದರಿಕೆಯಿಲ್ಲದೆ ಸತ್ಯ ಹೇಳಬೇಕು’ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಇಡೀ ದೇಶವೇ ಸೇನೆ ಮತ್ತು ಸರಕಾರದ ಜೊತೆ ನಿಂತಿದೆ. ಆದರೆ ಪ್ರಮುಖ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ. ಕೆಲ ದಿನಗಳ ಹಿಂದೆ ‘ಭಾರತದ ಭೂಪ್ರದೇಶದ ಒಂದಿಂಚನ್ನೂ ಯಾರೂ ವಶಪಡಿಸಿಕೊಂಡಿಲ್ಲ ಮತ್ತು ಯಾರೂ ಭಾರತದ ಗಡಿಯೊಳಗೆ ಇಲ್ಲ’ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ನಮಗೆ ತಿಳಿದುಬರುತ್ತಿದೆ. ಉಪಗ್ರಹದ ಚಿತ್ರಗಳು, ಲಡಾಖ್ ನ ಜನರು , ನಿವೃತ್ತ ಜನರಲ್ ಗಳು ಚೀನಾ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳುತ್ತಿದ್ದಾರೆ. ಕೇವಲ ಒಂದು ಭಾಗದಲ್ಲಿ ಅಲ್ಲ, ಬದಲಾಗಿ ಮೂರು ಪ್ರದೇಶಗಳಲ್ಲಿ” ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ.

“ಪ್ರಧಾನಿಯವರೇ ನೀವು ಸತ್ಯವನ್ನು ಮಾತನಾಡಬೇಕು. ನೀವು ದೇಶಕ್ಕೆ ಸತ್ಯವನ್ನು ಹೇಳಬೇಕು. ಹೆದರಬೇಡಿ. ಒಂದು ವೇಳೆ ಯಾವುದೇ ಭೂಪ್ರದೇಶ ವಶಪಡಿಸಿಕೊಂಡಿಲ್ಲ ಎಂದು ನೀವು ಹೇಳಿ, ನಿಜವಾಗಿಯೂ ಅವರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದರೆ ಅದು ಚೀನಾಗೆ ನೆರವಾಗಲಿದೆ. ನಾವು ಅವರ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಮತ್ತು ಅವರನ್ನು ಹೊರಗಟ್ಟಬೇಕು. ಹಾಗಾಗಿ ನೀವು ಹೆದರದೆ ಸತ್ಯವನ್ನು ಮಾತನಾಡಬೇಕು. ನಮ್ಮ ಭೂಭಾಗವನ್ನು ಚೀನಾ ವಶಪಡಿಸಿಕೊಂಡಿದೆ ಮತ್ತು ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿ. ಇಡೀ ದೇಶವೇ ನಿಮ್ಮ ಜೊತೆಗೆ ನಿಂತಿದೆ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News