ಕೋವಿಡ್-19: ಇತರ ದೇಶಗಳಿಗಿಂತ ಭಾರತದ ಸ್ಥಿತಿ ಉತ್ತಮ: ಪ್ರಧಾನಿ ಮೋದಿ

Update: 2020-06-27 14:23 GMT

 ಹೊಸದಿಲ್ಲಿ,ಜೂ.27: ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ದಾಖಲೆಯ 18,552 ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 5.08 ಲಕ್ಷಕ್ಕೆ ತಲುಪಿದ್ದು, ಸಾವುಗಳ ಸಂಖ್ಯೆ 15,600ನ್ನು ದಾಟಿದೆ.

ಇದೇ ವೇಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ರೆವರಂಡ್ ಜೋಸೆಫ್ ಮಾರ್ ಥೋಮಾ ಮೆಟ್ರೋಪಾಲಿಟನ್ ಅವರ 90ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,ದೇಶವ್ಯಾಪಿ ಲಾಕ್‌ಡೌನ್ ಮತ್ತು ಬಿಜೆಪಿ ನೇತೃತ್ವದ ಸರಕಾರವು ಕೈಗೊಂಡ ಉಪಕ್ರಮಗಳು ಕೋವಿಡ್-19 ವಿರುದ್ಧದ ಹೋರಾಟವನ್ನು ಇತರ ದೇಶಗಳಿಗಿಂತ ಹೆಚ್ಚು ಉತ್ತಮವಾಗಿ ಎದುರಿಸಲು ಭಾರತಕ್ಕೆ ನೆರವಾಗಿವೆ ಎಂದು ಹೇಳಿದರು.

ಕೊರೋನ ಯೋಧರ ಶ್ರಮದೊಂದಿಗೆ ಭಾರತವು ಕೊರೋನ ವೈರಸ್ ವಿರುದ್ಧ ದೃಢವಾಗಿ ಹೋರಾಡುತ್ತಿದೆ. ವೈರಸ್ ಭಾರತದಲ್ಲಿ ಅತ್ಯಂತ ತೀವ್ರ ಪರಿಣಾಮವನ್ನು ಬೀರಲಿದೆ ಎಂದು ವರ್ಷದ ಆರಂಭದಲ್ಲಿ ಕೆಲವರು ಭವಿಷ್ಯ ನುಡಿದಿದ್ದರು. ಆದರೆ ಲಾಕ್‌ಡೌನ್, ಸರಕಾರದ ಹಲವಾರು ಉಪಕ್ರಮಗಳು ಮತ್ತು ಜನತೆಯ ಸಹಕಾರದಿಂದಾಗಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ದೇಶದಲ್ಲಿ ಚೇತರಿಕೆಯ ದರ ಹೆಚ್ಚುತ್ತಿದೆ ಎಂದರು. ಆದರೆ ಪರಿಸ್ಥಿತಿಯನ್ನು ಲಘುವಾಗಿ ಪರಿಗಣಿಸದಂತೆ ಜನತೆಗೆ ಎಚ್ಚರಿಕೆ ನೀಡಿದ ಅವರು,‘ವಾಸ್ತವದಲ್ಲಿ ನಾವು ಇನ್ನಷ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಜನನಿಬಿಡ ಸ್ಥಳಗಳಿಂದ ದೂರವಿರುವುದು ಇವು ಮುಖ್ಯವಾಗಿವೆ ’ಎಂದರು.

ರಾಹುಲ್ ಟೀಕೆ

ದೇಶದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಶನಿವಾರ ಐದು ಲಕ್ಷ ದಾಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,ಈ ಸಾಂಕ್ರಾಮಿಕ ಪಿಡುಗನ್ನು ಎದುರಿಸಲು ಯಾವುದೇ ಯೋಜನೆ ಸರಕಾರದ ಬಳಿಯಿಲ್ಲ ಎಂದು ಹೇಳಿದ್ದಾರೆ.

‘ಕೋವಿಡ್-19 ದೇಶದ ಹೊಸ ಭಾಗಗಳಿಗೆ ತ್ವರಿತವಾಗಿ ಹರಡುತ್ತಿದೆ. ಅದನ್ನು ಹತ್ತಿಕ್ಕುವ ಯೋಜನೆ ಭಾರತ ಸರಕಾರದ ಬಳಿಯಿಲ್ಲ. ಪ್ರಧಾನಿ ವೌನವಾಗಿದ್ದಾರೆ. ಅವರು ಶರಣಾಗತರಾಗಿದ್ದಾರೆ ಮತ್ತು ಪಿಡುಗಿನ ವಿರುದ್ಧ ಹೋರಾಡಲು ನಿರಾಕರಿಸುತ್ತಿದ್ದಾರೆ ’ಎಂದು ಅವರು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News