ಗಡಿಯಲ್ಲಿ ಯಥಾಸ್ಥಿತಿ ಬದಲಿಸುವ ಪ್ರಯತ್ನ ಗಂಭೀರ ಪರಿಣಾಮಗಳನ್ನುಂಟು ಮಾಡಲಿದೆ: ಚೀನಾಕ್ಕೆ ಭಾರತದ ಎಚ್ಚರಿಕೆ

Update: 2020-06-27 14:36 GMT

ಹೊಸದಿಲ್ಲಿ,ಜೂ.27: ಬಲವಂತದಿಂದ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಯಥಾಸ್ಥಿತಿಯನ್ನು ಬದಲಿಸುವ ಪ್ರಯತ್ನಗಳು ಗಡಿಪ್ರದೇಶಗಳಲ್ಲಿ ನೆಲೆಸಿರುವ ಶಾಂತಿ ಮತ್ತು ನೆಮ್ಮದಿಗೆ ಧಕ್ಕೆಯನ್ನುಂಟು ಮಾಡುವುದಷ್ಟೇ ಅಲ್ಲ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ಪರಿಣಾಮಗಳನ್ನೂ ಉಂಟು ಮಾಡಬಹುದು ಎಂದು ಚೀನಾದಲ್ಲಿ ಭಾರತದ ರಾಯಭಾರಿಯಾಗಿರುವ ವಿಕ್ರಮ ಮಿಸ್ರಿ ಅವರು ಬೀಜಿಂಗ್ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

 ಚೀನಾ ಎಲ್‌ಎಸಿಯಲ್ಲಿ ಹೊಸ ರಚನೆಗಳನ್ನು ನಿಲ್ಲಿಸಿದರೆ ಮಾತ್ರ ಉಭಯ ದೇಶಗಳ ನಡುವಿನ ಮಿಲಿಟರಿ ಬಿಕ್ಕಟ್ಟು ಬಗೆಹರಿಸಬಹುದು ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಮಿಸ್ರಿ,ಪ್ರಸಕ್ತ ಬಿಕ್ಕಟ್ಟಿಗೆ ಚೀನದ ಕ್ರಮಗಳೇ ಕಾರಣ ಎಂದು ಭಾರತವು ಬೆಟ್ಟು ಮಾಡುತ್ತಲೇ ಬಂದಿದೆ. ‘ವಾಸ್ತವದಲ್ಲಿ ಎಪ್ರಿಲ್-ಮೇ ಅವಧಿಯಿಂದ ಆರಂಭಿಸಿ ಲಡಾಖ್ ವಿಭಾಗದಲ್ಲಿಯ ಎಲ್‌ಎಸಿಯಲ್ಲಿ ಚೀನಿಯರ ಹಲವಾರು ಕೃತ್ಯಗಳು ಆ ವಿಭಾಗದಲ್ಲಿ ನಮ್ಮ ಪಡೆಗಳ ಮಾಮೂಲು ಗಸ್ತು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮತ್ತು ಅಡ್ಡಿಯನ್ನುಂಟು ಮಾಡಿದ್ದವು ಮತ್ತು ಇದು ಕೆಲವು ಬಿಕ್ಕಟ್ಟಿನ ಸ್ಥಿತಿಗಳಿಗೆ ಕಾರಣವಾಗಿದ್ದವು ’ಎಂದಿದ್ದಾರೆ.

 ‘ಗಡಿಯಲ್ಲಿ ಚೀನಿ ಪಡೆಗಳ ಕ್ರಮಗಳು ದ್ವಿಪಕ್ಷೀಯ ಸಂಬಂಧಗಳಲ್ಲಿ ನಂಬಿಕೆಗೆ ಹಾನಿಯನ್ನುಂಟು ಮಾಡಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ,ಭವಿಷ್ಯದ ಕ್ರಮವನ್ನು ನಿರ್ಧರಿಸುವುದು ಈಗ ಚೀನಿ ಪಡೆಗಳ ಹೊಣೆಗಾರಿಕೆಯಾಗಿದೆ. ನಮ್ಮ ದೃಷ್ಟಿಕೋನದಲ್ಲಿ ಈ ಸಮಸ್ಯೆಗೆ ಪರಿಹಾರ ಸಾಕಷ್ಟು ನೇರವಾಗಿದೆ. ಭಾರತೀಯ ಯೋಧರಿಂದ ಸಾಮಾನ್ಯ ಗಸ್ತು ಕಾರ್ಯ ನಿರ್ವಹಣೆಗೆ ತಡೆಯೊಡ್ಡುವುದನ್ನು ಚೀನಾ ನಿಲ್ಲಿಸಬೇಕು. ದ್ವಿಪಕ್ಷೆಯ ಸಂಬಂಧಗಳು ಉಭಯ ದೇಶಗಳಲ್ಲಿ ಹೆಚ್ಚು ಮಹತ್ವದ್ದಾಗಿವೆ. ಅದು ನಮಗೆ ಮಾತ್ರವಲ್ಲ,ಇಡೀ ಪ್ರದೇಶಕ್ಕೂ ಮುಖ್ಯವಾಗಿದೆ ಎಂದಿದ್ದಾರೆ.

  ಇಡೀ ಗಲ್ವಾನ್ ಕಣಿವೆಯ ಮೇಲೆ ತನ್ನ ಸ್ವಾಮಿತ್ವವಿದೆ ಎಂಬ ಚೀನಾದ ಹೇಳಿಕೆಯನ್ನು ತಳ್ಳಿಹಾಕಿರುವ ಮಿಸ್ರಿ,ಇದು ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ ಎಂದಿದ್ದಾರೆ. ಚೀನಾ ಸರಕಾರವು ಬಳಸಿರುವ ಭಾಷೆಯು ಸಮಸ್ಯೆಯನ್ನು ಬಗೆಹರಿಸಲು ನೆರವಾಗುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿರುವ ಅವರು, ‘ಗಡಿಯಲ್ಲಿ ನಾವೇನೇ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಅವು ಯಾವಾಗಲೂ ಎಲ್‌ಎಸಿಯ ನಮ್ಮ ಭಾಗದಲ್ಲಿಯೇ ಇರುತ್ತವೆ. ಹೀಗಾಗಿ ಚೀನಾ ಯಥಾಸ್ಥಿತಿಯನ್ನು ಬದಲಿಸುವ ತನ್ನ ಪ್ರಯತ್ನವನ್ನು ಕೈಬಿಡಬೇಕು. ಗಲ್ವಾನ್ ಕಣಿವೆಯು ಯಾವಾಗಲೂ ಭಾರತದ ನಿಯಂತ್ರಣದಲ್ಲಿದೆ. 1962ರಿಂದ ಚೀನಾದ ಭೂಪಟದಲ್ಲಿಯೂ ಅದರ ಉಲ್ಲೇಖವಿಲ್ಲ. ಸುದೀರ್ಘಾವಧಿಯಿಂದ ಭಾರತೀಯ ಯೋಧರು ಈ ಪ್ರದೇಶದಲ್ಲಿ ಗಸ್ತು ಕಾರ್ಯವನ್ನು ಯಾವುದೇ ತೊಂದರೆಯಿಲ್ಲದೆ ನಿರ್ವಹಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ಚೀನಾ ಈಗ ಈ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಿರುವುದು ಅಚ್ಚರಿಯ ವಿಷಯವಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News