ಚೀನಾದ ಆಕ್ರಮಣವನ್ನು ಪ್ರಧಾನಿ ಬಹಿರಂಗವಾಗಿ ಖಂಡಿಸಲಿ: ಕಪಿಲ್ ಸಿಬಲ್ ಆಗ್ರಹ

Update: 2020-06-27 14:47 GMT

ಹೊಸದಿಲ್ಲಿ, ಜೂ.27: ಲಡಾಕ್‌ನಲ್ಲಿ ಭಾರತ-ಚೀನಾ ಸೇನೆಯ ಮಧ್ಯೆ ನಡೆದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟೀಕಾಪ್ರಹಾರವನ್ನು ಮುಂದುವರಿಸಿರುವ ಕಾಂಗ್ರೆಸ್, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಕುರಿತು ಸರಕಾರ ಸ್ಪಷ್ಟ ಮಾಹಿತಿ ನೀಡಬೇಕು ಹಾಗೂ ಚೀನಾದ ನಾಚಿಕೆಗೆಟ್ಟ ಆಕ್ರಮಣವನ್ನು ಬಹಿರಂಗವಾಗಿ ಖಂಡಿಸಬೇಕು ಎಂದು ಆಗ್ರಹಿಸಿದೆ.

ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ಕಳೆದ 6 ವರ್ಷಗಳು ಭಾರತದ ಅತೀ ದೊಡ್ಡ ರಾಜತಾಂತ್ರಿಕ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ಬಿಕ್ಕಟ್ಟನ್ನು ಪರಿಹರಿಸಲು ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿ ಈಗಿರುವ ಪರಿಸ್ಥಿತಿ ಕುರಿತು ದೇಶದ ಜನತೆಗೆ ಪ್ರಧಾನಿ ಮಾಹಿತಿ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.

ಭಾರತದ ನೆಲವನ್ನು ಯಾರಾದರೂ ಆಕ್ರಮಿಸಿದ್ದರೆ ಅವರನ್ನು ಹಿಂದಕ್ಕೆ ಅಟ್ಟುತ್ತೇವೆ ಎಂದು ಪ್ರಧಾನಿ ಭರವಸೆ ನೀಡಬೇಕು. ಹಾಗೆ ಹೇಳಿದರೆ ಜನತೆ ಹಾಗೂ ಎಲ್ಲಾ ವಿಪಕ್ಷಗಳೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತವೆ ಎಂದು ಸಿಬಲ್ ಹೇಳಿದ್ದಾರೆ. ಅಲ್ಲದೆ ಚೀನಾದ ಉತ್ಪನ್ನಗಳ ಬಹಿಷ್ಕಾರಕ್ಕೆ ನಡೆಯುತ್ತಿರುವ ಅಭಿಯಾನವನ್ನು ಉಲ್ಲೇಖಿಸಿರುವ ಅವರು, ಬಿಕ್ಕಟ್ಟು ಪರಿಹಾರಕ್ಕೆ ಆರ್ಥಿಕ ದಿಗ್ಬಂಧನ ಸೂಕ್ತ ಕ್ರಮವಲ್ಲ ಎಂದು ಸರಕಾರವನ್ನು ಎಚ್ಚರಿಸಿದರು.

ಇದಕ್ಕೂ ಮುನ್ನ, ಲಡಾಖ್‌ನಲ್ಲಿ ಚೀನಾದ ಸೇನೆಯ ಉಪಸ್ಥಿತಿಯನ್ನು ತೋರಿಸುವ ಉಪಗ್ರಹಗಳು ರವಾನಿಸಿದ ಚಿತ್ರಗಳನ್ನು ಉಲ್ಲೇಖಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, ಭಾರತ-ಚೀನಾ ಗಡಿಭಾಗದಲ್ಲಿ ಮೇ 22 ಮತ್ತು ಜೂನ್ 22ರ ನಡುವಿನ ಅವಧಿಯಲ್ಲಿರುವ ವ್ಯತ್ಯಾಸವನ್ನು ಗಮನಿಸಿ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News