ಜುವೆಂಟಸ್ ಗೆ ಮಣಿದ ಲೆಸ್ಸಿ

Update: 2020-06-27 17:49 GMT

  ರೋಮ್, ಜೂ.27: ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಅಪೂರ್ವ ಪೆನಾಲ್ಟಿ ಗೋಲು ನೆರವಿನಲ್ಲಿ ಜುವೆಂಟಸ್ ತಂಡ ಇಲ್ಲಿ ನಡೆದ ಸೆರ್ರಿ ಎ ಇಟಾಲಿಯನ್ ಫುಟ್ಬಾಲ್ ಲೀಗ್ ಟೂರ್ನಮೆಂಟ್‌ನಲ್ಲಿ 10 ಮಂದಿ ಸದಸ್ಯರ ಲೆಸ್ಸಿ ತಂಡದ ವಿರುದ್ಧ 4-0 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.

ರೊನಾಲ್ಡೊ , ಪಾಲೊ ಡೈಬಾಲಾ ,ಮ್ಯಾಥಿಜ್ಸ್ ಡಿ ಲಿಗ್ಟ್ ಮತ್ತು ಗೊನ್ಜಾ ಲೊ ಹಿಗುಯಿನ್ ಅವರ ಗೋಲುಗಳ ನೆರವಿನಲ್ಲಿ ಜುವೆಂಟಸ್ ಗೆಲುವಿನ ನಗೆ ಬೀರಿತು.

    35ರ ಹರೆಯದ ರೊನಾಲ್ಡೊ ಮೊದಲಾರ್ಧದಲ್ಲಿ ಚಮತ್ಕಾರಿಕ ಓವರ್‌ಹೆಡ್ ಕಿಕ್‌ನೊಂದಿಗೆ ಅಪೂರ್ವ ಗೋಲು ಜಮೆ ಮಾಡಿದರು. 32ನೇ ನಿಮಿಷದಲ್ಲಿ ಲೆಸ್ಸಿ ತಂಡದ ಫ್ಯಾಬಿಯೊ ಲುಸಿಯೋನಿ ನೇರ ಕೆಂಪು ಕಾರ್ಡ್ ಪಡೆಯುವುದರೊಂದಿಗೆ ಆ ತಂಡ ಸಂಕಷ್ಟದಲ್ಲಿ ಸಿಲುಕಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಜಮೆ ಮಾಡಲು ಸಾಧ್ಯವಾಗಲಿಲ್ಲ. ಜುವೆಂಟಸ್‌ನ ಪಾಲೊ ಡೈಬಾಲಾ 53ನೇ ನಿಮಿಷದಲ್ಲಿ ಗೋಲು ಜಮೆ ಮಾಡುವುದರ ಮೂಲಕ 10 ಸದಸ್ಯರ ಲೆಸ್ಸಿ ತಂಡಕ್ಕೆ ಆಘಾತ ನೀಡಿದರು. ಒಂಬತ್ತು ನಿಮಿಷಗಳ ನಂತರ ರೊನಾಲ್ಡೊ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಆಕರ್ಷಕ ಗೋಲು ಕಬಳಿಸಿದರು.

      ಜುವೆಂಟಸ್ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿತು. 83ನೇ ನಿಮಿಷದಲ್ಲಿ ಹಿಗುಯಿನ್ ಗೋಲು ಕಬಳಿಸಿದರು. ಎರಡು ನಿಮಿಷಗಳ ನಂತರ(85ನೇ ನಿಮಿಷ) ಮ್ಯಾಥಿಜ್ಸ್ ಗೋಲು ಕಬಳಿಸಿದರು. ಕೋವಿಡ್ -19 ಕಾರಣದಿಂದ ಸ್ಥಗಿತಗೊಂಡ ಬಳಿಕ ಪ್ರಾರಂಭಗೊಂಡ ಲೀಗ್ ಪಂದ್ಯದಲ್ಲಿ ಜುವೆಂಟಸ್ ಪರ ಮೊದಲ ಬಾರಿಗೆ ಹಿಗುಯಿನ್ ಕಾಣಿಸಿಕೊಂಡಿದ್ದರು. ಪೋರ್ಚುಗಲ್ ಸ್ಟಾರ್ ರೊನಾಲ್ಡೊ ಅವರ ನೆರವಿನಲ್ಲಿ 83ನೇ ನಿಮಿಷದಲ್ಲಿ ಗೋಲು ಗಳಿಸಿದರು.

  ಸೆಂಟರ್ ಬ್ಯಾಕ್ ಮ್ಯಾಥಿಜ್ಸ್ ಡಿ ಲಿಗ್ಟ್ ನಾಲ್ಕನೆಯದನ್ನು ಡೌಗ್ಲಾಸ್ ಕೋಸ್ಟಾ ಅವರ ಸಹಾಯದಿಂದ ಹೆಡರ್ ಮೂಲಕ ಗೋಲುಪೆಟ್ಟಿಗೆಗೆ ಸೇರಿಸಿದರು. ಸತತ ಒಂಬತ್ತನೇ ಬಾರಿ ಇಟಾಲಿಯನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜುವೆಂಟಸ್, 28 ಪಂದ್ಯಗಳಲ್ಲಿ 69 ಪಾಯಿಂಟ್ ಗಳಿಸಿದೆ. ಲೆಸ್ಸಿ 25 ಪಾಯಿಂಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News