ಪೂರ್ವ ಲಡಾಖ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ನಿಯೋಜಿಸಿದ ಭಾರತ

Update: 2020-06-28 04:42 GMT

ಹೊಸದಿಲ್ಲಿ: ಭಾರತ- ಚೀನಾ ಗಡಿಯ ಪೂರ್ವ ಲಡಾಖ್ ಪ್ರದೇಶದಲ್ಲಿ ಎದುರಾಗಬಹುದಾದ ಆಕ್ರಮಣವನ್ನು ಎದುರಿಸಲು ಸೇನೆಯನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಡುವ ನಿಟ್ಟಿನಲ್ಲಿ ಭಾರತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಈ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಿದೆ.

ಜೂನ್ 15ರಂದು ಉಭಯ ದೇಶಗಳ ಸೇನೆಗಳ ನಡುವೆ ಗಲ್ವಾನ್ ಕಣಿವೆಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ತನ್ನ ಕಡೆಯಲ್ಲಾದ ಸಾವು ನೋವಿನ ವಿವರವನ್ನು ಚೀನಾ ಬಹಿರಂಗಪಡಿಸಿಲ್ಲ. ಆ ಬಳಿಕ ಗಡಿ ಉದ್ವಿಗ್ನತೆ ಮುಂದುವರಿದಿದೆ.
ಗರಿಷ್ಠ ಸರ್ವಸನ್ನದ್ಧ ಸ್ಥಿತಿಯಲ್ಲಿ ಎಲ್ಲ ಪಡೆಗಳು ಒಗ್ಗೂಡಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಘಟನಾವಳಿಗಳಿಗೂ ಆವು ಸಜ್ಜಾಗಿವೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಭಾರತದ ವಾಯು ಸುರಕ್ಷಾ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್, ಇಸ್ರೇಲ್ ನಿರ್ಮಿತ ಸ್ಪೈಡೆರ್, ಸೋವಿಯತ್ ಮೂಲದ ಪೆಕ್ಹೋರಾ ಮತ್ತು ಓಎಸ್‌ಎ-ಎಕೆ ಸಿಸ್ಟಮ್‌ಗಳು ಸೇರಿವೆ. ಈ ವಾಯು ಸುರಕ್ಷಾ ವ್ಯವಸ್ಥೆಯು ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ ಮಾನವ ರಹಿತ ಬಾಹ್ಯಾಕಾಶ ವಾಹನಗಳನ್ನು ಗುರಿ ಮಾಡಲಿವೆ.

ಈ ಮಧ್ಯೆ ಗಲ್ವಾನ್ ಕಣಿವೆಯ ವಾಸ್ತವ ನಿಯಂತ್ರಣ ರೇಖೆ ಪ್ರದೇಶದಲ್ಲಿ ಭಾರತ ಹಾಗೂ ಚೀನಾ ಯುದ್ಧ ವಿಮಾನಗಳು, ಹೆಲಿಕಾಪ್ಟರ್, ಟ್ಯಾಂಕ್‌ಗಳು, ಘನ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳನ್ನು ನಿಯೋಜಿಸಿದ್ದು, ಗಲ್ವಾನ್ ಕಣಿವೆಯ ರಕ್ತಪಾತದ ಬಳಿಕ ಈ ಪ್ರದೇಶ ಇಡೀ ವಿಶ್ವದ ಗಮನ ಸೆಳೆದಿದೆ.

ಚೀನಾ ಸೇನೆಯನ್ನು ನಿಯೋಜಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಕೂಡಾ ನಿಯೋಜನೆಯನ್ನು ಬಲಪಡಿಸಿದ್ದೇವೆ. ಎಲ್‌ಎಸಿ ಉದ್ದಕ್ಕೂ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದು, ಪಿಎಲ್‌ಎನಿಂದ ಭಯಪಡಿಸುವ ಯಾವುದೇ ಕ್ರಮ ಎದುರಾದರೂ, ಎದುರಿಸಲು ಸರ್ವ ಸನ್ನದ್ಧರಾಗಿದ್ದೇವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News