ಕೋವಿಡ್ ಹೊಡೆತಕ್ಕೆ ಈ ಎಂಟು ರಾಜ್ಯಗಳು ತತ್ತರ

Update: 2020-06-28 05:51 GMT

ಹೊಸದಿಲ್ಲಿ : ದೇಶದಲ್ಲಿ ವರದಿಯಾಗಿರುವ ಒಟ್ಟು ಕೊರೋನ ವೈರಸ್ ಪ್ರಕರಣಗಳ ಪೈಕಿ ಶೇಕಡ 85.5 ರಷ್ಟು ಪ್ರಕರಣಗಳು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಹೀಗೆ ಎಂಟು ರಾಜ್ಯಗಳಿಂದ ವರದಿಯಾಗಿವೆ.

ಸೋಂಕಿತರ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ರಾಜ್ಯಗಳ ಪಾಲು ಶೇಕಡ 87ರಷ್ಟು. ಪರಿಣಾಮವಾಗಿ ಈ ರಾಜ್ಯಗಳಲ್ಲಿ ಸಾಂಕ್ರಾಮಿಕ ವಿರುದ್ಧದ ಹೋರಾಟ ನಿಜಕ್ಕೂ ಸವಾಲುದಾಯಕ ಎನ್ನುವ ಸ್ಥಿತಿ ತಲುಪಿದೆ.

ಕೋವಿಡ್-19 ನಿಭಾಯಿಸುವ ಸಲುವಾಗಿ ರಚಿಸಿದ ಸಚಿವರ ಗುಂಪಿಗೆ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದೆ. ಶನಿವಾರ ಈ ಗುಂಪು 17ನೇ ಸಭೆ ನಡೆಸಿದ್ದು, ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ದೇಶದಲ್ಲಿ ಗರಿಷ್ಠ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ದಿನ 3 ಲಕ್ಷ ತಪಾಸಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ದೇಶದಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 58.13% ಆಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ ಮೃತಪಟ್ಟವರ ಪ್ರಮಾಣ ಶೇಕಡ 3ರಷ್ಟಿದೆ ಎಂದು  ಸಭೆಯ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಸಚಿವ ಹರ್ಷವರ್ಧನ್ ಅಂಕಿ ಅಂಶ ನೀಡಿ ವಿವರಿಸಿದರು.

ದೇಶದಲ್ಲಿ ಶನಿವಾರ 2.20 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ತಪಾಸಣೆ ನಡೆಸಿದವರ ಸಂಖ್ಯೆ 79,96,707ಕ್ಕೇರಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದರು. ದೇಶದಲ್ಲಿ 1026 ಪ್ರಯೋಗಾಲಯಗಳು ಕೋವಿಡ್-19 ಪರೀಕ್ಷೆ ನಡೆಸುತ್ತಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News