ಚೀನಾದ ಕಮ್ಯುನಿಸ್ಟ್ ಪಕ್ಷದ ಜೊತೆ ಬಿಜೆಪಿ, ಆರೆಸ್ಸೆಸ್ ಗೆ ಇರುವ ಸಂಬಂಧವೇನು?: ಕಾಂಗ್ರೆಸ್ ಪ್ರಶ್ನೆ

Update: 2020-06-28 09:26 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಚೀನಾ ಜತೆಗೆ ಭ್ರಷ್ಟ ಹಾಗೂ ವಿಧ್ವಂಸಕ ಸಂಬಂಧ ಹೊಂದಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಎದಿರೇಟು ನೀಡಿರುವ ಕಾಂಗ್ರೆಸ್ , ಚೀನಾದ ಕಮ್ಯುನಿಷ್ಟ್ ಪಕ್ಷ ಹಾಗೂ ಬೀಜಿಂಗ್ ಜತೆಗಿನ ಸಂಬಂಧದ ಬಗ್ಗೆ ಆಡಳಿತ ಪಕ್ಷಕ್ಕೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದೆ.

“ಚೀನಾ ಜತೆಗೆ ಬಿಜೆಪಿ ಹೊಂದಿದ ಆಳವಾದ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಯಿಂದ ಬಿಜೆಪಿ ಭಯಗೊಂಡಿದೆ” ಎಂದು ಪಕ್ಷದ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಟೀಕಿಸಿದ್ದಾರೆ.

ಚೀನಾ ಅಸೋಸಿಯೇಶನ್ ಫಾರ್ ಇಂಟರ್ ನ್ಯಾಷನಲ್ ಫ್ರೆಂಡ್ನಿ ಕಾಂಟ್ಯಾಕ್ಟ್ (ಸಿಎಐಎಫ್‍ಸಿ) ಜತೆಗಿನ ಬಿಜೆಪಿ ಸಂಬಂಧ ಹಾಗೂ ಆಡಳಿತಾರೂಢ ಚೀನಿ ಕಮ್ಯುನಿಸ್ಟ್ ಪಕ್ಷದ ಜತೆಗಿನ ಸಂವಾದದ ಬಗೆಗಿನ ಪ್ರಶ್ನೆ ಸೇರಿದಂತೆ ಹತ್ತು ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ.

“ಬಿಜೆಪಿ ಹಾಗೂ ಸಿಸಿಪಿ ಸಂಬಂಧ ಏನು?, 2007ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು ಸಿಸಿಪಿ ನಿಯೋಗದ ಭೇಟಿ ವೇಳೆ ಬಿಜೆಪಿ ಹಾಗೂ ಸಿಸಿಪಿ ನಡುವಿನ ಐತಿಹಾಸಿಕ ಸಂಬಂಧದ ಬಗ್ಗೆ ಬಣ್ಣಿಸಿದ್ದರು, 2008ರಲ್ಲಿ ಸಿಸಿಪಿ ಪಾಲಿಟ್‍ ಬ್ಯೂರೊ ಸದಸ್ಯರನ್ನು ಭೇಟಿಯಾದಾಗಲೂ ಇದನ್ನು ಪುನರುಚ್ಚರಿಸಿದ್ದೇಕೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“ಆರೆಸ್ಸೆಸ್ ಮುಖಂಡರು 2009ರ ಜನವರಿಯಲ್ಲಿ ಚೀನಾಗೆ ಭೇಟಿ ನೀಡಿದ್ದೇಕೆ?, ರಾಜಕೀಯ ಪಕ್ಷವಲ್ಲದಿದ್ದರೂ ಆರೆಸ್ಸೆಸ್ ನಿಯೋಗವನ್ನು ಸಿಸಿಪಿ ಆಹ್ವಾನಿಸಿದ್ದೇಕೆ?, ನಮ್ಮ ಸೂಕ್ಷ್ಮ ರಾಜ್ಯವಾದ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಬಗ್ಗೆ ಏನು ಚರ್ಚೆ ನಡೆದಿತ್ತು?” ಎಂದು ಪ್ರಶ್ನೆ ಹಾಕಿದೆ.

“ಅಂತೆಯೇ 2011ರ ಜನವರಿ 19ರಂದು ಬಿಜೆಪಿ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿಯವರು ಸಿಸಿಪಿ ಆಹ್ವಾನದ ಮೇರೆಗೆ ಚೀನಾಗೆ ಐದು ದಿನಗಳ ಭೇಟಿ ನೀಡಿದ್ದೇಕೆ?, ಮೋದಿ ಹಲವು ಬಾರಿ ಚೀನಾಗೆ ಭೇಟಿ ನೀಡಿದ್ದಲ್ಲದೇ, ಚೀನಾದ ಮುಖಂಡರ ಗೌರವಾರ್ಥ ಸಮಾರಂಭ ಏರ್ಪಡಿಸಿದ್ದೇಕೆ?” ಎಂದೂ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News