ಜಮ್ಮು- ಕಾಶ್ಮೀರದಲ್ಲಿ 2 ತಿಂಗಳ ಎಲ್‌ ಪಿಜಿ ದಾಸ್ತಾನು ಇರಿಸಲು ಸರಕಾರದ ಸೂಚನೆ

Update: 2020-06-28 17:40 GMT

ಹೊಸದಿಲ್ಲಿ, ಜೂ.28: ಕಾಶ್ಮೀರ ಕಣಿವೆಯಲ್ಲಿ 2 ತಿಂಗಳಿಗೆ ಅಗತ್ಯವಿರುವಷ್ಟು ಎಲ್‌ ಪಿಜಿ(ಅಡುಗೆ ಅನಿಲ)ದ ದಾಸ್ತಾನು ಇರಿಸುವಂತೆ ಸರಕಾರ ತೈಲ ಮಾರಾಟ ಸಂಸ್ಥೆಗಳಿಗೆ ಸೂಚಿಸಿರುವುದು ಭಾರೀ ಊಹಾಪೋಹಕ್ಕೆ ಕಾರಣವಾಗಿದ್ದು, ಇಂತಹ ಉಪಕ್ರಮಗಳ ಅಗತ್ಯವಿದೆಯೇ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

ಜೂನ್ 23ರಂದು ನಡೆದ ಸಭೆಯಲ್ಲಿ ಜಮ್ಮು -ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಅವರ ಸಲಹೆಗಾರರು ಅಂಗೀಕರಿಸಿದ ಸೂಚನೆಯಂತೆ ಕಾಶ್ಮೀರದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ 27ರಂದು ಆದೇಶ ಹೊರಡಿಸಿದೆ. ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಭೂಕುಸಿತ ಸಂಭವಿಸುವ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗುವ ಸಾಧ್ಯತೆಯಿದೆ. ಇದರಿಂದ ಎಲ್‌ಪಿಜಿ ಪೂರೈಕೆಗೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗವರ್ನರ್ ಅವರ ಸಲಹೆಗಾರರ ಸೂಚನೆಯಲ್ಲಿ ತಿಳಿಸಲಾಗಿದೆ.

ಇದು ತುರ್ತು ವಿಷಯ ಎಂದು ತೈಲ ಸಂಸ್ಥೆಗಳಿಗೆ ರವಾನಿಸಿದ ಆದೇಶದಲ್ಲಿ ತಿಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ಚಳಿಗಾಲದ ಸಂದರ್ಭ ಇಂತಹ ಪ್ರಕ್ರಿಯೆ ಸಾಮಾನ್ಯವಾದರೂ ಈ ಬಾರಿ ಭಾರೀ ದಾಸ್ತಾನು ಇರಿಸಲು ಸೂಚಿಸಿರುವುದು ಊಹಾಪೋಹಕ್ಕೆ ಕಾರಣವಾಗಿದೆ.

ಇದೇ ಸಂದರ್ಭ, ಕೇಂದ್ರ ಮೀಸಲು ಪಡೆಯ ತಂಡದ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕೆಂದು (ಐಟಿಐ ಕಟ್ಟಡ ಸಹಿತ 16 ಶಿಕ್ಷಣ ಸಂಸ್ಥೆಗಳು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಕಟ್ಟಡಗಳನ್ನು ಒದಗಿಸುವಂತೆ ) ಗಂಡೇರ್‌ ಬಾಲ್ ಜಿಲ್ಲಾ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಡಳಿತಕ್ಕೆ ಸೂಚಿಸಿರುವುದನ್ನು ಉಲ್ಲೇಖಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ, ಈ ರೀತಿಯ ಆದೇಶಗಳು ಜನರಲ್ಲಿ ಗೊಂದಲಕ್ಕೆ ಕಾರಣವಾಗುವುದರಿಂದ ಸರಕಾರ ಈ ಬಗ್ಗೆ ವಿವರಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News