​ಉಸಿರಾಡಲು ಸಾಧ್ಯವಾಗುತ್ತಿಲ್ಲ: ಇದು ಕೋವಿಡ್‌ಗೆ ಬಲಿಯಾದ ವ್ಯಕ್ತಿಯ ಕೊನೆಯ ಸಂದೇಶ...

Update: 2020-06-29 04:57 GMT

ಹೈದರಾಬಾದ್ : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ 34 ವರ್ಷದ ಯುವಕನೊಬ್ಬ ತನ್ನ ತಂದೆಗೆ ಕಳುಹಿಸಿದ ಕೊನೆಯ ಸಂದೇಶದಲ್ಲಿ ಉಸಿರಾಟ ಸಾಧ್ಯವೇ ಆಗುತ್ತಿಲ್ಲ ಎಂದು ಹೇಳಿರುವ ಬಗೆಗಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

10 ಖಾಸಗಿ ಆಸ್ಪತ್ರೆಗಳು ಈ ರೋಗಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಬಳಿಕ ಬುಧವಾರ ಸರ್ಕಾರಿ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೃತ ಯುವಕನ ತಂದೆ ವಿವರಿಸಿದ್ದಾರೆ.

ಉಸಿರಾಡಲು ಸಾಧ್ಯವಾಗುತ್ತಿಲ್ಲ... ಪದೇ ಪದೇ ಬೇಡಿಕೊಂಡರೂ ಕಳೆದ ಮೂರು ಗಂಟೆಗಳಿಂದ ಆಮ್ಲಜನಕ ಮುಂದುವರಿಸಿಲ್ಲ. ಅಪ್ಪಾ, ನನಗಿನ್ನು ಉಸಿರಾಡಲು ಸಾಧ್ಯವೇ ಇಲ್ಲ. ನನ್ನ ಹೃದಯ ನಿಂತಂತಾಗಿದೆ.. ಡ್ಯಾಡಿ..ಬೈ.. ಎಲ್ಲರಿಗೂ ಬೈ ಡ್ಯಾಡಿ.. ಎಂದು ವೀಡಿಯೊದಲ್ಲಿ ಯುವಕ ಹೇಳುತ್ತಿದ್ದಾನೆ.

ಕೋವಿಡ್-19 ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಬಗೆಗಿನ ಉದಾಸೀನ ಮನೋಭಾವವನ್ನು ವಿವರಿಸಲು ಜನ ಈ ವೀಡಿಯೊ ಟ್ವೀಟ್ ಮಾಡಿದ್ದಾರೆ. ಯುವಕ ಸಾಯುವ ಒಂದು ಗಂಟೆ ಮುನ್ನ ಚಿತ್ರೀಕರಿಸಿದ ವೀಡಿಯೊ ಇದಾಗಿದೆ.

ನನ್ನ ಮಗ ಸಹಾಯ ಯಾಚಿಸಿದ್ದಾನೆ. ಆದರೆ ಯಾರೂ ನೆರವಿಗೆ ಮುಂದಾಗಲಿಲ್ಲ. ಆತನ ಅಂತ್ಯಸಂಸ್ಕಾರ ಮುಗಿಸಿ ಬಂದ ಬಳಿಕ ನಾನು ಈ ವೀಡಿಯೊ ನೋಡಿದೆ. ಬೈ ಡ್ಯಾಡಿ ಎಂದು ಆತ ಹೇಳಿದ್ದ ಎಂದು ತಂದೆ ವಿವರಿಸಿದರು. ನನ್ನ ಮಗನಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಮಗನಿಗೆ ಆಮ್ಲಜನಕ ಏಕೆ ಕೊಟ್ಟಿಲ್ಲ ? ವೀಡಿಯೊದಲ್ಲಿ ಮಗ ಹೇಳುತ್ತಿರುವುದು ಕೇಳಿ ಹೃದಯ ಕಿತ್ತು ಬರುತ್ತಿದೆ ಎಂದು ವಿವರಿಸಿದ್ದಾರೆ.

ಅದೇ ದಿನ ಮಗನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಮರುದಿನ ಬೆಳಗ್ಗೆ ಆತನ ಗಂಟಲು ಸ್ರಾವ ಸ್ವೀಕರಿಸಿದ್ದ ಖಾಸಗಿ ಆಸ್ಪತ್ರೆಯಿಂದ ವರದಿ ಬಂದಿದ್ದು, ಕೋವಿಡ್-19 ಸೋಂಕಿನಿಂದ ಆತ ಮೃತಪಟ್ಟಿರುವುದನ್ನು ವರದಿ ದೃಢಪಡಿಸಿತ್ತು. ಯುವಕನ ತಂದೆ, ಪತ್ನಿ, ಸಹೋದರ, ಅತ್ತಿಗೆ ಮತ್ತು ಭಾವನಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನುವುದು ಕುಟುಂಬದಲ್ಲಿ ಆತಂಕ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News