ಪಾಕ್ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ಉಗ್ರರ ದಾಳಿ, ಆರು ಮಂದಿ ಸಾವು, ನಾಲ್ವರು ಬಂದೂಕುಧಾರಿಗಳ ಹತ್ಯೆ

Update: 2020-06-29 09:19 GMT

ಕರಾಚಿ, ಜೂ.29: ಇಲ್ಲಿನ ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್ ಮೇಲೆ ನಾಲ್ವರು ಉಗ್ರರು ಇಂದು ಬೆಳಗ್ಗೆ ದಾಳಿ ನಡೆಸಿದ್ದು, ದಾಳಿಕೋರರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಗ್ರರ ದಾಳಿಗೆ ಕನಿಷ್ಟ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಹಲವು ಖಾಸಗಿ ಬ್ಯಾಂಕ್‌ಗಳ ಮುಖ್ಯ ಕಚೇರಿ ಇರುವ ಅತ್ಯಂತ ಉನ್ನತ ಮಟ್ಟದ ಭದ್ರತೆ ಇರುವ ಕಟ್ಟಡಕ್ಕೆ ಬಂದೂಕುಧಾರಿಗಳು ಗ್ರೆನೇಡ್ ಹಾಗೂ ಗನ್ ದಾಳಿ ನಡೆಸಿದ್ದಾರೆ.

"ನಾಲ್ವರು ದಾಳಿಕೋರರನ್ನು ಸಾಯಿಸಲಾಗಿದೆ. ಅವರೆಲ್ಲರೂ ಸಿಲ್ವರ್ ಕೊರೊಲ್ಲಾ ಕಾರ್‌ನಲ್ಲಿ ಬಂದಿದ್ದರು. ಉಗ್ರರ ಗನ್ ದಾಳಿಗೆ ನಾಲ್ವರು ಭದ್ರತಾ ಸಿಬ್ಬಂದಿಗಳು, ಪೊಲೀಸ್ ಹಾಗೂ ಜನರು ಸಾವನ್ನಪ್ಪಿದ್ದಾರೆ'' ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮೊನ್ ಹೇಳಿದ್ದಾರೆ.

ಪೊಲೀಸರು ಆಧುನಿಕ ಸ್ವಯಂ ಚಾಲಿತ ಅಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಈ ತನಕ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News