ಕೇವಲ 50 ರೂ. ಪಡೆದು ಡಯಾಲಿಸಿಸ್ ಪ್ರಕ್ರಿಯೆ ನಡೆಸುವ ಡಾ. ಫುವಾದ್ ಹಲೀಂ

Update: 2020-06-29 10:57 GMT

ಕೊಲ್ಕತ್ತಾ: ದಕ್ಷಿಣ ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್ ಸಮೀಪ ಸಣ್ಣ ಡಯಾಲಿಸಿಸ್ ಕ್ಲಿನಿಕ್ ನಡೆಸುವ ಸಿಪಿಎಂ ನಾಯಕರೂ ಆಗಿರುವ 49 ವರ್ಷದ ವೈದ್ಯ ಫುವಾದ್ ಹಲೀಂ ಅವರು ಒಂದು ಡಯಾಲಿಸಿಸ್ ಪ್ರಕ್ರಿಯೆಗೆ ಕೇವಲ ರೂ. 50 ಶುಲ್ಕ ವಿಧಿಸುವ ಮೂಲಕ ನೂರಾರು ಜನರ ಪಾಲಿಗೆ ಆಪತ್ಬಾಂಧವರಾಗಿದ್ದಾರೆ.

ಈ ಕ್ಲಿನಿಕ್ ಅನ್ನು ಅವರು ತಮ್ಮ 60 ಮಂದಿ ಸ್ನೇಹಿತರು ಹಾಗೂ ಸಂಬಂಧಿಕರ ಜತೆಗೆ ಆರಂಭಿಸಿರುವ ಕೊಲ್ಕತ್ತಾ ಸ್ವಾಸ್ಥ್ಯ ಸಂಕಲ್ಪ ಎಂಬ ಹೆಸರಿನ ಎನ್‍ ಜಿಒ ಮೂಲಕ ನಡೆಸುತ್ತಿದ್ದಾರೆ. ಲಾಕ್ ಡೌನ್ ಆರಂಭಗೊಂಡಂದಿನಿಂದ ಹಿಡಿದು ಇಲ್ಲಿಯ ತನಕ ಡಾ. ಹಲೀಂ ಅವರ ತಂಡದ ಮೂವರು ವೈದ್ಯರು ಹಾಗೂ ನಾಲ್ಕು ಮಂದಿ ಟೆಕ್ನಿಷಿಯನ್‍ಗಳು 2,190 ಡಯಾಲಿಸಿಸ್ ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಕೋವಿಡ್ ಸೋಂಕಿನ ಭಯದಿಂದ ಹಲವು ಆಸ್ಪತ್ರೆಗಳು ರೋಗಿಗಳನ್ನು ವಾಪಸ್ ಕಳುಹಿಸುತ್ತಿರುವ ಇಂದಿನ ಸಂದರ್ಭದಲ್ಲಿ ಹಲೀಂ ಅವರ ಕ್ಲಿನಿಕ್ ರೋಗಿಗಳು ಕೋವಿಡ್-19 ಪಾಸಿಟಿವ್ ಆಗಿದ್ದರೂ ಅಥವಾ ನೆಗೆಟಿವ್ ಆಗಿದ್ದರೂ ಅವರಿಗೆ ಡಯಾಲಿಸಿಸ್ ನಡೆಸುತ್ತದೆ, ಆದರೆ ಕೋವಿಡ್ ಲಕ್ಷಣಗಳನ್ನು ಹೊಂದಿರುವವರು ಡಯಾಲಿಸಿಸ್ ನಂತರ ಸರಕಾರಿ ಫೀವರ್ ಕ್ಲಿನಿಕ್‍ ಗಳಲ್ಲಿ ಪರೀಕ್ಷೆ ನಡೆಸಬೇಕು ಎಂಬುದೇ ಅವರು ವಿಧಿಸುವ ಷರತ್ತಾಗಿದೆ.

ಡಾ. ಫುವಾದ್ ಹಲೀಂ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ಸ್ಪೀಕರ್ ಆಗಿ 1982ರಿಂದ 2011 ತನಕ 29 ವರ್ಷ ಸೇವೆ ಸಲ್ಲಿಸಿದ್ದ ಹಾಶಿಂ ಅಬ್ದುಲ್ ಹಲೀಂ ಅವರ ಪುತ್ರರಾಗಿದ್ದಾರೆ.

ಡಾ. ಫುವಾದ್ ಹಲೀಂ ಅವರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ಟಿಕೆಟ್‍ನಿಂದ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ  ಮೂರನೇ ಸ್ಥಾನ ಗಳಿಸಿ ಸೋತಿದ್ದರು. ಅವರು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಗೆಲುವು ಸಾಧಿಸಿದ್ದರು. ಡಾ ಫುವಾದ್ ಅವರು ಸಿಪಿಎಂನ ಸಾರ್ವಜನಿಕ ಪರಿಹಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಆದರೆ ಅವರು ಆರಂಭಿಸಿರುವ ಸ್ವಾಸ್ಥ್ಯ ಸಂಕಲ್ಪ ಸಂಘಟನೆ ಸಿಪಿಎಂ ಜತೆ ಯಾವುದೇ ಸಂಬಂಧ ಹೊಂದಿಲ್ಲ. ಅವರ ಡಯಾಲಿಸಿಸ್ ಕ್ಲಿನಿಕ್ ಯಾವುದೇ ಸರಕಾರಿ ಯಾ ಖಾಸಗಿ ಆಸ್ಪತ್ರೆ ಜತೆ ಸಹಯೋಗವನ್ನೂ ಹೊಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News