ವಿದೇಶಿ ಪ್ರಜೆಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಆದೇಶದ ಬಗ್ಗೆ ಕೇಂದ್ರದ ಸ್ಪಷ್ಟನೆ ಕೇಳಿದ ಸುಪ್ರೀಂ

Update: 2020-06-29 17:18 GMT

ಹೊಸದಿಲ್ಲಿ, ಜೂ.29: ದಿಲ್ಲಿಯಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 2,500ಕ್ಕೂ ಹೆಚ್ಚು ವಿದೇಶೀ ಪ್ರಜೆಗಳ ವೀಸಾ ರದ್ದುಗೊಳಿಸಿರುವ ಬಗ್ಗೆ ಅವರಿಗೆ ವೈಯಕ್ತಿಕ ಆದೇಶಗಳನ್ನು ನೀಡಲಾಗಿದೆಯೇ ಎಂಬುದನ್ನು ಸ್ಪಷ್ಟೀಕರಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರಕಾರಕ್ಕೆ ಸೂಚಿಸಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿ ವಿದೇಶಿ ಪ್ರಜೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಕೇಂದ್ರ ಗೃಹ ಇಲಾಖೆಗೆ ಈ ಸೂಚನೆ ನೀಡಿದೆ. ಕೇಂದ್ರ ಸರಕಾರ 900 ವಿದೇಶಿ ಪ್ರಜೆಗಳಿಗೆ ಸಾರ್ವತ್ರಿಕ ಕಪ್ಪುಪಟ್ಟಿ ಸೂಚನೆ ನೀಡಿದೆ. ಯಾರಿಗೂ ವೈಯಕ್ತಿಕ ಸೂಚನೆ ನೀಡಿಲ್ಲ. ತಮ್ಮ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿ ವೀಸಾ ರದ್ದುಗೊಳಿಸಿರುವುದು ಸಂವಿಧಾನಬಾಹಿರ ಮತ್ತು ಏಕಪಕ್ಷೀಯ ಕ್ರಮವಾಗಿದ್ದು ಸರಕಾರದ ಕಪ್ಪುಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದುಹಾಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಕಪ್ಪುಪಟ್ಟಿಯಲ್ಲಿ ಸೇರಿದ ವ್ಯಕ್ತಿಗಳು ಮುಂದಿನ 10 ವರ್ಷ ದೇಶವನ್ನು ಪ್ರವೇಶಿಸುವಂತಿಲ್ಲ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಎಂ ಖಾನ್ವಿಳ್ಕರ್ ನೇತೃತ್ವದ ನ್ಯಾಯಪೀಠ, ವಿದೇಶೀ ಪ್ರಜೆಗಳ ವೀಸಾ ರದ್ದುಗೊಳಿಸಿ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದ ಮೇಲೆಯೂ ಅವರು ಯಾಕೆ ಇನ್ನೂ ಇಲ್ಲೇ ಇದ್ದಾರೆ. ಮತ್ತು ಯಾಕೆ ಅವರನ್ನು ಗಡೀಪಾರು ಮಾಡುತ್ತಿಲ್ಲ ಎಂದು ಸರಕಾರವನ್ನು ಪ್ರಶ್ನಿಸಿತು. ಅಲ್ಲದೆ, ವೀಸಾ ರದ್ದುಗೊಳಿಸಿ ಕಪ್ಪುಪಟ್ಟಿಗೆ ಸೇರಿಸಿದ ಬಗ್ಗೆ ಅವರಿಗೆ ಸಾರ್ವತ್ರಿಕ ಸೂಚನೆ ನೀಡಲಾಗಿದೆಯೇ ಅಥವಾ ವೈಯಕ್ತಿಕವಾಗಿ ಸೂಚಿಸಲಾಗಿದೆಯೇ ಎಂಬುದನ್ನು ಜುಲೈ 2ರೊಳಗೆ ತಿಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ. ಹೊಸದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಲವು ವಿದೇಶೀ ಪ್ರಜೆಗಳು ಮಸೀದಿ ಮತ್ತು ಮದರಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಹಲವು ರಾಜ್ಯ ಸರಕಾರಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಗೃಹ ಸಚಿವಾಲಯ 2,500ಕ್ಕೂ ಹೆಚ್ಚು ತಬ್ಲೀಗಿ ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News