ಏಕದಿನ: ಸಚಿನ್ 15 ಸಾವಿರ ರನ್‌ಗೆ 13 ವರ್ಷ

Update: 2020-06-29 17:58 GMT

ಮುಂಬೈ, ಜೂ. 29: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರೆಂದು ಗುರುತಿಸಲ್ಪಟ್ಟ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 15 ಸಾವಿರ ರನ್‌ಗಳ ಮೈಲುಗಲ್ಲನ್ನು ತಲುಪಿ 13 ವರ್ಷಗಳು ಸಂದಿವೆ.

  ‘ಮಾಸ್ಟರ್ ಬ್ಲಾಸ್ಟರ್’ ಏಕದಿನ ಪಂದ್ಯಗಳಲ್ಲಿ 15,000 ರನ್‌ಗಳ ಹೆಗ್ಗುರುತನ್ನು ತಲುಪಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

  2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಲ್‌ಫಾಸ್ಟ್‌ನಲ್ಲಿ ನಡೆದ 2ನೇ ಏಕದಿನ ಪಂದ್ಯದ ವೇಳೆ ಸಚಿನ್ ಈ ಮೈಲಿಗಲ್ಲು ಮುಟ್ಟಿದ್ದರು. ಅಲ್ಲಿ ಅವರು 93 ರನ್ ಗಳಿಸಿದ್ದರು. ಪಂದ್ಯವನ್ನು 6 ವಿಕೆಟ್‌ಅಂತರದಲ್ಲಿ ಜಯಿಸಲು ಭಾರತಕ್ಕೆ ನೆರವಾಗಿದ್ದರು.

 ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಕೇವಲ 4 ವಿಕೆಟ್ ನಷ್ಟದಲ್ಲಿ 226 ರನ್ ಗಳಿಸಿತ್ತು. ಸಚಿನ್ ಉತ್ತಮ ಬ್ಯಾಟಿಂಗ್ ಕಾರಣ ಭಾರತವು  ಸುಲಭವಾಗಿ ಗುರಿಯನ್ನು ತಲುಪಲು ಸಾಧ್ಯವಾಗಿತು.

 ಆದರೆ ‘ಮಾಸ್ಟರ್ ಬ್ಲಾಸ್ಟರ್’ ಒಂದು ಶತಕ ವಂಚಿತಗೊಂಡರು. ಆದಾಗ್ಯೂ, ಈ ಸರಣಿಯು ಅವರಿಗೆ ಹೆಚ್ಚು ರನ್ ಗಳಿಸಲು ನೆರವಾಗಿತ್ತು. ನ್ಯಾಟ್‌ವೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸಚಿನ್ ಏಳು ಇನಿಂಗ್ಸ್ ಗಳಿಂದ 53.52 ಸರಾಸರಿಯಲ್ಲಿ 374 ರನ್ ಗಳಿಸಿದ್ದರು. ಇದರಲ್ಲಿ 99, 94 ಮತ್ತು 71 ಸ್ಕೋರ್‌ಗಳು ಸೇರಿವೆ.

  90ರ ದಶಕದಲ್ಲಿ ಪಾಕಿಸ್ತಾನ ವಿರುದ್ಧ ಐದು ಪಂದ್ಯಗಳಿಂದ ಸಚಿನ್ 259 ರನ್ ಗಳಿಸಿದರು. ಸರಣಿಯಲ್ಲಿ ಅವರು 97 ಮತ್ತು 99 ರನ್‌ಗಳಿಗೆ ಔಟಾದರು. 2001ರಲ್ಲಿ ಇಂದೋರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಆಡಿ 10,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಸಚಿನ್ 463 ಏಕದಿನ ಪಂದ್ಯಗಳನ್ನು ಆಡಿದ್ದು, 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ.

  ಇದಲ್ಲದೆ, ಅವರು ತಮ್ಮ ವೃತ್ತಿಜೀವನದಲ್ಲಿ 49 ಶತಕ ಮತ್ತು 96 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಮತ್ತು ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News