ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 14 ಲಕ್ಷ ರೂ. ಬಿಲ್ !

Update: 2020-06-30 15:08 GMT
ಸಾಂದರ್ಭಿಕ ಚಿತ್ರ

ನೋಯ್ಡ : ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ವಿಧಿಸುವ ದರಕ್ಕೆ ಸಂಬಂಧಿಸಿದಂತೆ ಇನ್ನೂ ಸ್ಪಷ್ಟತೆ ಇಲ್ಲ. ಈ ನಡುವೆಯೇ ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಇಲ್ಲಿನ ಖಾಸಗಿ ಆಸ್ಪತ್ರೆ 14 ಲಕ್ಷ ರೂ. ಬಿಲ್ ನೀಡಿದೆ.

ವ್ಯಕ್ತಿಗೆ 20 ದಿನಗಳ ಕಾಲ ಅಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗೌತಮ ಬುದ್ಧ ನಗರ ಜಿಲ್ಲಾಡಳಿತ ಭರವಸೆ ನೀಡಿದೆ.

ನೋಯ್ಡ ನಿವಾಸಿಯಾಗಿರುವ ಈ ಯುನಾನಿ ವೈದ್ಯ ರವಿವಾರ ಮೃತಪಟ್ಟಿದ್ದರು. ನೋಯ್ಡಿದ ಫೋರ್ಟಿಸ್ ಆಸ್ಪತ್ರೆಗೆ ಇವರನ್ನು ಜೂ. 7ರಂದು ದಾಖಲಿಸಲಾಗಿತ್ತು. 15 ದಿನಗಳ ಕಾಲ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ತಿಳಿದುಬಂದಿದೆ. ಒಪ್ಪಂದ ಮಾಡಿಕೊಳ್ಳಲಾದ ಹಣವನ್ನು ಪಾವತಿಸುವುದಾಗಿ 10 ರೂ. ಮುದ್ರಾಂಕ ಪತ್ರದಲ್ಲಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ದೇಹವನ್ನು ಸಂಬಂಧಿಕರ ವಶಕ್ಕೆ ನೀಡಲಾಗಿದೆ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.

ದುಃಖತಪ್ತ ಕುಟುಂಬಕ್ಕೆ 14 ಲಕ್ಷ ರೂ. ಬಿಲ್ ನೀಡಿದ ಆಸ್ಪತ್ರೆ ಬಳಿಕ 4 ಲಕ್ಷದ ವಿಮಾ ಸುರಕ್ಷೆ ಹಾಗೂ ಕುಟುಂಬ ಮುಂಗಡವಾಗಿ ಪಾವತಿಸಿದ 25 ಸಾವಿರ ರೂ.  ಕಳೆದು 10.2 ಲಕ್ಷ ರೂಪಾಯಿಗೆ ಪರಿಷ್ಕರಿಸಿದೆ. ಆದರೆ ಈ ಶುಲ್ಕಗಳು ಪಾರದರ್ಶಕವಾಗಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯ ಶುಲ್ಕಗಳಿಗೆ ಅನುಸಾರವಾಗಿದೆ ಎಂದು ಫೋರ್ಟಿಸ್ ಸಮರ್ಥಿಸಿಕೊಂಡಿದೆ.

ಚಿಕಿತ್ಸಾ ವಿವರಗಳನ್ನು ಪ್ರತಿ ಹಂತದಲ್ಲಿ ರೋಗಿಯ ಕುಟುಂಬಕ್ಕೆ ನೀಡಲಾಗುತ್ತಿತ್ತು. ರೋಗಿಯ ತೀವ್ರತೆಯ ಬಗ್ಗೆಯೂ ಕೌನ್ಸಿಲಿಂಗ್ ನಡೆಸಲಾಗಿತ್ತು. ಸಿಎಂಒ ಕಚೇರಿಗೂ ವಿವರಗಳನ್ನು ಸಲ್ಲಿಸಲಾಗಿದೆ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News