ಪ್ರತಿಕ್ರಿಯೆ, ಸ್ಪಷ್ಟೀಕರಣ ನೀಡಲು ಸರಕಾರದಿಂದ ಆಹ್ವಾನ ಬಂದಿದೆ ಎಂದ 'ಟಿಕ್ ಟಾಕ್'

Update: 2020-06-30 06:50 GMT

ಹೊಸದಿಲ್ಲಿ:  ಭಾರತ ಸರಕಾರ 59 ಚೀನಿ ಆ್ಯಪ್‍ ಗಳಿಗೆ ದೇಶದಲ್ಲಿ ನಿಷೇಧ ಹೇರಿದ ಬೆನ್ನಿಗೇ ಸರಕಾರದ ಆದೇಶದ ಕುರಿತಂತೆ ಪ್ರತಿಕ್ರಿಯೆ ನೀಡಲು ಹಾಗೂ ಸ್ಪಷ್ಟೀಕರಣ ಸಲ್ಲಿಸಲು ತನಗೆ ಸರಕಾರ ಆಹ್ವಾನ ನೀಡಿದೆ ಎಂದು ಟಿಕ್ ಟಾಕ್ ಹೇಳಿದೆ.

ಭಾರತ ಸರಕಾರ ನಿಷೇಧಿಸಿರುವ ಆ್ಯಪ್‍ ಗಳ ಪೈಕಿ ಚೀನೀ ಟೆಕ್ ಸಂಸ್ಥೆ ಬೈಟ್ ಡ್ಯಾನ್ಸ್ ಇದರ ಮಾಲಕತ್ವದ ಜನಪ್ರಿಯ ಟಿಕ್ ಟಾಕ್ ಕೂಡ ಸೇರಿದೆ. ಆದರೆ ಸದ್ಯ ಟಿಕ್ ಟಾಕ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಫೋನ್‍ಗಳಲ್ಲಿ  ಹಾಗೂ ಆ್ಯಪಲ್ ಆ್ಯಪ್ ಸ್ಟೋರ್ ಮೂಲಕ ಐಫೋನ್‍ಗಳಲ್ಲಿ ಡೌನ್‍ಲೋಡ್ ಮಾಡುವುದು ಸಾಧ್ಯವಿಲ್ಲ.

“ಸರಕಾರದ ಆದೇಶ ಪಾಲಿಸುವ ನಿಟ್ಟಿನ ಪ್ರಕ್ರಿಯೆ ನಡೆಸುತ್ತಿದ್ದೇವೆ. ಅದೇ ಸಮಯ ಸರಕಾರಕ್ಕೆ ಸಂಬಂಧಿಸಿದವರ ಜತೆ ಮಾತನಾಡಿ ಆದೇಶದ ಕುರಿತು ನಮ್ಮ ಪ್ರತಿಕ್ರಿಯೆ ಹಾಗೂ ಸ್ಪಷ್ಟೀಕರಣ ನೀಡಲು ನಮಗೆ ಆಹ್ವಾನ ದೊರಕಿದೆ” ಎಂದು ಟಿಕ್ ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಹೇಳಿದ್ದಾರೆ.

“ಭಾರತದಲ್ಲಿ ಡಾಟಾ ಸುರಕ್ಷತಾ ನಿಯಮಗಳಿಗೆ ತಮ್ಮ ಸಂಸ್ಥೆ ಬದ್ಧವಾಗಿದೆ ಹಾಗೂ ಭಾರತದಲ್ಲಿನ ಬಳಕೆದಾರರ ಕುರಿತ ಮಾಹಿತಿಯನ್ನು ಚೀನಾ ಸರಕಾರ ಸಹಿತ ಯಾವುದೇ ವಿದೇಶಿ ಸರಕಾರದ ಜತೆ  ಶೇರ್ ಮಾಡಿಲ್ಲ, ಭವಿಷ್ಯದಲ್ಲಿ ಶೇರ್ ಮಾಡುವಂತೆ ಹೇಳಿದರೂ ಮಾಡುವುದಿಲ್ಲ, ಬಳಕೆದಾರರ ಖಾಸಗಿತನ ರಕ್ಷಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದೆ'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News