ಕೊರೋನ ಆತಂಕದ ನಡುವೆ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ವೈರಸ್ ಪತ್ತೆ

Update: 2020-06-30 08:24 GMT

ವಾಷಿಂಗ್ಟನ್: ಚೀನಾದ ಸಂಶೋಧಕರು ಹೊಸ ವಿಧದ ಹಂದಿ ಜ್ವರ (ಸ್ವೈನ್ ಫ್ಲೂ) ಕಂಡು ಹಿಡಿದಿದ್ದಾರೆ ಹಾಗೂ ಈ ಹಂದಿ ಜ್ವರ ಮತ್ತೊಂದು ಸಾಂಕ್ರಾಮಿಕ ರೋಗವಾಗಿ ಮಾರ್ಪಡುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕಾದ ವಿಜ್ಞಾನ ಪತ್ರಿಕೆ ಪಿಎನ್‍ಎಎಸ್ ‍ನಲ್ಲಿ ಸೋಮವಾರ ಪ್ರಕಟಗೊಂಡ ಅಧ್ಯಯನಾ ವರದಿಯಲ್ಲಿ ತಿಳಿಸಲಾಗಿದೆ.

ಜಿ4 ಎಂದು ಹೆಸರಿಸಲಾದ ಈ ಸ್ವೈನ್ ಫ್ಲೂ 2009ರಲ್ಲಿ ಸಾಂಕ್ರಾಮಿಕ ರೋಗ ಉಂಟು ಮಾಡಿದ್ದ ಎಚ್1ಎನ್1 ಸ್ಟ್ರೈನ್‍ ನಿಂದಲೇ ಹುಟ್ಟಿಕೊಂಡಿದೆ ಹಾಗೂ ಅದು ಮಾನವರಿಗೆ ಸೋಂಕು  ಹರಡಿಸುವ ಎಲ್ಲಾ ಸಾಮರ್ಥ್ಯ ಹೊಂದಿದೆ ಎಂದು ಚೀನಾ ವಿವಿಗಳು ಹಾಗೂ ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್ ಇಲ್ಲಿನ ವಿಜ್ಞಾನಿಗಳು ತಿಳಿಸಿದ್ದಾರೆ.

ಸಂಶೋಧಕರು 2011ರಿಂದ 2018ರ ತನಕ  ಚೀನಾದ 10 ಪ್ರಾಂತ್ಯಗಳ ಕಸಾಯಿಖಾನೆಗಳಿಂದ ಹಾಗೂ ಒಂದು ಪಶುವೈದ್ಯಕೀಯ ಆಸ್ಪತ್ರೆಯಿಂದ  ಸಂಗ್ರಹಿಸಿದ 30,000 ಮೂಗಿನ ದ್ರವ ಮಾದರಿಗಳ ಮೂಲಕ 179 ಸ್ವೈನ್ ಫ್ಲೂ ವೈರಸ್ ಅನ್ನು ಪ್ರತ್ಯೇಕಿಸಿದ್ದರು. ಇವುಗಳಲ್ಲಿ ಹೆಚ್ಚಿನ ವೈರಸ್‍ ಗಳು ಹಂದಿಗಳಲ್ಲಿ 2016ರಿಂದ ಪ್ರಮುಖವಾಗಿ ಕಾಣಿಸಿದ್ದವು.

ನಂತರ ಫ್ಲೂ ಅಧ್ಯಯನಗಳಲ್ಲಿ ಪ್ರಮುಖವಾಗಿ ಬಳಸಲ್ಪಡುವ ಫೆರೆಟ್ ‍ಗಳ ಮೇಲೆ ಪ್ರಯೋಗ ನಡೆಸಿದ ಸಂಶೋಧಕರು ಅವುಗಳು  ಮಾನವ ಜೀವಕೋಶಗಳಲ್ಲಿ  ಹಲವು ಪಟ್ಟು ಏರಿಕೆಯಾಗಿ ಗಂಭೀರ ಲಕ್ಷಣಗಳನ್ನು ಉಂಟು ಮಾಡಬಹುದು ಎಂದು ಕಂಡುಕೊಂಡಿದ್ದಾರೆ.

ಈಗಾಗಲೇ ಜನಸಂಖ್ಯೆಯ ಶೇ 4.4ರಷ್ಟು ಮಂದಿಗೆ ಈ ವೈರಸ್‍ ನಿಂದ ಬಾಧಿತರಾಗಿರಬಹುದು ತಗಲಿರಬಹುದು. ಆದರೆ ಪ್ರಾಣಿಗಳಿಂದ ಮಾನವರಿಗೆ ಹರಡುವ ಈ ಸೋಂಕು, ಮಾನವರಿಂದ ಮಾನವರಿಗೆ ಹರಡುವುದೇ ಎಂಬ ಕುರಿತು ಇನ್ನೂ ತಿಳಿದು ಬಂದಿಲ್ಲ.

ಹಂದಿಗಳ ಫಾರ್ಮ್ ‍ಗಳಲ್ಲಿ ಕೆಲಸ ಮಾಡುವವರ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ ಎಂದೂ ಸಂಶೋಧಕರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News