ನ.30ರವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವಿಸ್ತರಣೆ: ಪ್ರಧಾನಿ ಘೋಷಣೆ

Update: 2020-06-30 15:30 GMT

ಹೊಸದಿಲ್ಲಿ,ಜೂ.30: ದೇಶದಲ್ಲಿ ಕೊರೋನ ವೈರಸ್ ಪಿಡುಗು ಆರಂಭಗೊಂಡ ಬಳಿಕ ಆರನೇ ಬಾರಿಗೆ ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಘೋಷಿಸಿದರು.

ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲ ಹಬ್ಬಗಳು ಬರಲಿರುವ ಹಿನ್ನೆಲೆಯಲ್ಲಿ 80 ಕೋಟಿ ಜನರಿಗೆ ಪ್ರತಿ ತಿಂಗಳು ಐದು ಕೆಜಿ ಅಕ್ಕಿ ಮತ್ತು ಒಂದು ಕೆಜಿ ಬೇಳೆಯನ್ನು ಉಚಿತವಾಗಿ ನೀಡಲು ಈ ಯೋಜನೆಯನ್ನು ಈಗ ದೀಪಾವಳಿ ಮತ್ತು ಛಠ್ ಪೂಜಾವರೆಗೆ ಅಥವಾ ನವೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗುವುದು. ಇದಕ್ಕಾಗಿ 90,000 ಕೋ.ರೂ.ಗಳನ್ನು ವ್ಯಯಿಸಲು ಸರಕಾರವು ಯೋಜಿಸಿದೆ ಎಂದು ಹೇಳಿದರು.

‘ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್’ ಯೋಜನೆಯ ಕುರಿತೂ ಮಾತನಾಡಿದ ಮೋದಿ,ಈ ಯೋಜನೆಯು ಕಾಯಂ ನೆಲೆ ಅಥವಾ ಆದಾಯವಿಲ್ಲದ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಲಾಭ ನೀಡಲಿದೆ ಎಂದರು.

ಕೊರೋನ ವೈರಸ್ ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸಿದ್ದಕ್ಕಾಗಿ ರೈತರು ಮತ್ತು ತೆರಿಗೆದಾತರನ್ನು ಪ್ರಶಂಸಿಸಿದ ಅವರು,”ನೀವೆಲ್ಲ ನಿಮ್ಮ ತೆರಿಗೆಗಳನ್ನು ಪಾವತಿಸಿದ್ದು ಇಂದು ಬಡವರು ಮತ್ತು ವಲಸಿಗರು ತಮ್ಮ ತಟ್ಟೆಯಲ್ಲಿ ಅನ್ನವನ್ನು ಕಾಣಲು ಕಾರಣವಾಗಿದೆ. ಭಾರತವು ಇಂದು ಹಸಿವೆಯಿಂದಿಲ್ಲ ಎಂದಿದ್ದರೆ ಅದಕ್ಕೆ ನೀವು ಕಾರಣರಾಗಿದ್ದೀರಿ. ಇಡೀ ದೇಶದ ಪರವಾಗಿ ನಾನು ರೈತರು ಮತ್ತು ತೆರಿಗೆದಾತರ ಆಭಾರವನ್ನು ಮನ್ನಿಸುತ್ತೇನೆ” ಎಂದು ಹೇಳಿದರು.

ಪೂರ್ವ ಲಡಾಖ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಿಂಸಾತ್ಮಕ ಘರ್ಷಣೆಗಳಲ್ಲಿ 20 ಭಾರತೀಯ ಯೋಧರು ಕೊಲ್ಲಲ್ಪಟ್ಟ ಬಳಿಕ ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾಡಿದ ತನ್ನ 17 ನಿಮಿಷಗಳ ಭಾಷಣದಲ್ಲೆಲ್ಲೂ ಚೀನಾದ ಹೆಸರನ್ನು ಮೋದಿ ಉಲ್ಲೇಖಿಸಲಿಲ್ಲ.

ನಿಯಮಗಳಿಗಿಂತ ಯಾರೂ ಮೇಲಲ್ಲ

 ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಜಾರಿಯಲ್ಲಿರುವ ನಿಯಮಗಳ ಉಲ್ಲಂಘನೆ ವಿರುದ್ಧ ಜನತೆಗೆ ಎಚ್ಚರಿಕೆ ನೀಡಿದ ಮೋದಿ,ಜೂನ್ 1ರಂದು ಅನ್‌ಲಾಕ್ 1 ಜಾರಿಗೊಂಡ ಬಳಿಕ ಜನರ ಸಾಮಾಜಿಕ ಮತ್ತು ವೈಯಕ್ತಿಕ ನಡವಳಿಕೆಗಳಲ್ಲಿ ಹೆಚ್ಚುತ್ತಿರುವ ನಿರ್ಲಕ್ಷ್ಯವು ಕೊರೋನ ವೈರಸ್ ವಿರುದ್ಧ ಮುನ್ನೆಚ್ಚರಿಕೆಗಳನ್ನು ವಹಿಸಬೇಕಾಗಿರುವ ಈ ನಿರ್ಣಾಯಕ ಸಮಯದಲ್ಲಿ ಹೆಚ್ಚಿನ ಕಳವಳವನ್ನುಂಟು ಮಾಡಿದೆ. ಗ್ರಾಮ ಪ್ರಧಾನನಾಗಲಿ ಅಥವಾ ದೇಶದ ಪ್ರಧಾನಿಯಾಗಲಿ,ಯಾರೂ ನಿಯಮಗಳಿಗಿಂತ ಮೇಲಲ್ಲ ಎಂದು ಹೇಳಿದರು.

“ನಾವು ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳುತ್ತಿದ್ದೆವು, ಸ್ಯಾನಿಟೈಸರ್‌ಗಳನ್ನು ಬಳಸುತ್ತಿದ್ದೆವು, ಮಾಸ್ಕ್‌ಗಳನ್ನು ಧರಿಸುತ್ತಿದ್ದೆವು,ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಿದ್ದೆವು ಮತ್ತು ಹಸ್ತಲಾಘವಗಳನ್ನು ತಪ್ಪಿಸುತ್ತಿದ್ದೆವು. ಆದರೆ ಇವೆಲ್ಲ ಈಗ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವುದು ಕಂಡು ಬರುತ್ತಿಲ್ಲ. ಇದು ಚಿಂತೆಗೆ ಕಾರಣವಾಗಿದೆ” ಎಂದ ಅವರು,”ಇದು ಗಂಭೀರ ವಿಷಯವಾಗಿದೆ. ನಾವು ಶಿಸ್ತನ್ನು ಪಾಲಿಸಲೇಬೇಕು. ನಿಯಮಗಳನ್ನು ಪಾಲಿಸದವರನ್ನು ತಡೆದು ಅವರಲ್ಲಿ ಅರಿವು ಮೂಡಿಸಬೇಕು” ಎಂದರು.

“ನಾವೀಗ ಅನ್‌ಲಾಕ್ 2ನ್ನು ಪ್ರವೇಶಿಸುತ್ತಿದ್ದೇವೆ. ಇದರೊಂದಿಗೆ ಶೀತ, ಕೆಮ್ಮು ಮತ್ತು ಜ್ವರ ಹೆಚ್ಚಾಗುವ ಋತುವನ್ನೂ ಪ್ರವೇಶಿಸುತ್ತಿದ್ದೇವೆ. ದಯವಿಟ್ಟು ನಿಮ್ಮ ಬಗ್ಗೆ ಕಾಳಜಿಯನ್ನು ವಹಿಸಿ,ನಿರ್ಲಕ್ಷ ಬೇಡ ಎಂದು ಎಲ್ಲರಿಗೂ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ” ಎಂದ ಪ್ರಧಾನಿ,ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಲಾಕ್‌ಡೌನ್ ಮತ್ತು ಇತರ ಸಕಾಲಿಕ ನಿರ್ಧಾರಗಳಿಂದಾಗಿ ಲಕ್ಷಾಂತರ ಜೀವಗಳು ಉಳಿದಿವೆ ಎಂದರು.

ಅನ್‌ಲಾಕ್ ಬಳಿಕ ಪ್ರಕರಣಗಳಲ್ಲಿ ಏರಿಕೆ

ಜೂನ್ 1ರಿಂದ ಅನ್‌ಲಾಕ್ 1 ಜಾರಿಗೊಂಡ ಬಳಿಕ ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಜೂ.1ರಂದು ಸುಮಾರು 8,300 ಹೊಸ ಪ್ರಕರಣಗಳು ವರದಿಯಾಗಿದ್ದರೆ ಸೋಮವಾರ ಇಂತಹ ಪ್ರಕರಣಗಳ ಸಂಖ್ಯೆ 18,552 ಆಗಿತ್ತು.

ಜೂನ್ 1ರಂದು ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1.9 ಲ.ಆಗಿದ್ದರೆ 30 ದಿನಗಳ ಬಳಿಕ ಈ ಸಂಖ್ಯೆ 5.6 ಲ.ವನ್ನು ದಾಟಿದೆ.

                                     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News