ಅರ್ನಬ್ ಗೋಸ್ವಾಮಿ ವಿರುದ್ಧದ ಎಫ್‍ಐಆರ್ ಗಳಿಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ

Update: 2020-06-30 13:01 GMT

ಮುಂಬೈ: ಪಾಲ್ಘರ್ ಗುಂಪು ಥಳಿತ ಹಾಗೂ ಬಾಂದ್ರಾ ರೈಲು ನಿಲ್ದಾಣದಲ್ಲಿ ವಲಸಿಗ ಕಾರ್ಮಿಕರ ಜಮಾವಣೆ ಪ್ರಕರಣಗಳ ಸಂಬಂಧ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ‘ರಿಪಬ್ಲಿಕ್ ಟಿವಿ’ಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಎರಡು ಎಫ್‍ಐಆರ್ ಗಳಿಗೆ ಬಾಂಬೆ ಹೈಕೋರ್ಟಿನ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.

`ಹೊರನೋಟಕ್ಕೆ ಅರ್ನಬ್ ವಿರುದ್ಧ ಯಾವುದೇ ಆರೋಪಗಳಿಲ್ಲ' ಎಂದು ಹೇಳಿದ ಜಸ್ಟಿಸ್ ಉಜ್ಜಲ್ ಭುಯನ್ ಹಾಗೂ ಜಸ್ಟಿಸ್ ರಿಯಾಝ್ ಚಗ್ಲಾ ಅವರ ನೇತೃತ್ವದ ವಿಭಾಗೀಯ ಪೀಠ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಆದೇಶಿಸಿದೆ. 

ಅರ್ನಬ್ ಅವರು ಸಮಾಜದ ಸಾಮರಸ್ಯ ಕೆಡಿಸಲು ಯತ್ನಿಸಿದ್ದಾರೆಂದು ಸಾಬೀತುಪಡಿಸಲು ಏನೂ ಇಲ್ಲ ಎಂದೂ ನ್ಯಾಯಾಲಯ ಹೇಳಿದೆ. ಮುಂದಿನ ಆದೇಶದ ತನಕ ಅವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ನ್ಯಾಯಾಲಯ ತಡೆ ಹೇರಿದೆ.

ಪ್ರಕರಣವನ್ನು ವಿಭಾಗೀಯ ಪೀಠ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದೆ.

ಈ ಹಿಂದೆ ಜೂನ್ 12ರಂದು ನಡೆದ ವಿಚಾರಣೆಯಲ್ಲಿ ಕೂಡ ಮುಂದಿನ ಆದೇಶ ತನಕ ಅವರ ವಿರುದ್ಧ ಕ್ರಮ ಕೈಗೊಳ್ಳುವ ಹಾಗಿಲ್ಲ ಎಂದು ನ್ಯಾಯಾಲಯ ಹೇಳಿತ್ತು.  ಇದಕ್ಕೂ ಮುನ್ನ ಜೂನ್ 9ರಂದು ಅರ್ನಬ್‍ಗೆ ಆದೇಶ ನೀಡಿದ್ದ ಹೈಕೋರ್ಟ್, ಎನ್ ಎಂ ಜೋಷಿ ಮಾರ್ಗ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News