‘ಕೊರೋನಿಲ್’ ಕೊರೋನವೈರಸನ್ನು ಗುಣಪಡಿಸುತ್ತದೆ ಎಂದು ನಾವು ಹೇಳಿಲ್ಲ: ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ

Update: 2020-07-01 16:05 GMT

ಹೊಸದಿಲ್ಲಿ,ಜು.1: ತಾನು ಸಂಶೋಧಿಸಿರುವ ನೂತನ ಆಯುರ್ವೇದೀಯ ಔಷಧಿಗಳು ಕೊರೋನ ವೈರಸ್ ಸೋಂಕನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಹೇಳಿಕೆಯಿಂದ ಬಾಬಾರಾಮ್ ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ ಯುಟರ್ನ್ ಹೊಡೆದಿದೆ.

ಈ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ ಮಂಗಳವಾರ ಹೇಳಿಕೆ ನೀಡಿದು, ನೂತನ ಔಷಧಿಗಳು ಕೊರೋನ ವೈರಸ್ ಸೋಂಕನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆಯೆಂದು ಪತಂಜಲಿ ಯಾವತ್ತೂ ಘೋಷಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಆದಾಗ್ಯೂ ಬಾಬಾರಾಮ್ ದೇವ್ ಅವರು, ಕಳೆದ ತಿಂಗಳು ಸುದ್ದಿಗೋಷ್ಠಿಯೊಂದರಲ್ಲಿ ಕೊರೋನ ಹಾಗೂ ಸ್ವಾಸರಿ ಎಂಬ ಎರಡು ನೂತನ ಔಷಧಿಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಮಾತನಾಡುತ್ತಾ, ರೋಗಿಗಳ ಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಪತಂಜಲಿಯ ನೂತನ ಔಷಧಿಗಳು ಶೇಕಡ 100ರಷ್ಟು ಉತ್ತಮ ಫಲಿತಾಂಶಗಳನ್ನು ತೋರಿಸಿವೆ ಎಂದು ಹೇಳಿದ್ದರು.

 ತನ್ನ ಕಂಪೆನಿಯು ಸಿದ್ಧಪಡಿಸಿರುವ ಕೊರೊನಿಲ್ ಹಾಗೂ ಶ್ವಾಸರಿ ಔಷಧಿಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯವಿರುವ ಅನುಮೋದನೆಗಳನ್ನು ಪಡೆದ ಬಳಿಕ ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠದಲ್ಲಿರುವವ ಕೊರೋನ ವೈರಸ್ ರೋಗಿಗಳ ಮೇಲೆ ಪರೀಕ್ಷಿಸಲಾಗಿತ್ತು ಎಂದವರು ಹೇಳಿದ್ದರು.

ಪತಂಜಲಿ ಸಂಸ್ಥೆಯು ತನ್ನ ನೂತನ ಆಯುರ್ವೇದೀಯ ಸಂಯೋಜನೆಗಳನ್ನು ಕೊರೋನ ವೈರಸ್‌ ಸೋಂಕನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆಯೆಂದು ಜಾಹೀರಾತು ನೀಡುವುನ್ನು ನಿಲ್ಲಿಸಬೇಕೆಂದು ಆಯುಷ್ ಸಚಿವಾಲಯ ತಿಳಿಸಿತ್ತು.

‘ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಕೊರೋನ ವೈರಸ್ ಔಷಧಿಯೆಂದು ಪತಂಜಲಿ ಉಲ್ಲೇಖಿಸಿರಲಿಲ್ಲ’

  ಉತ್ತರಾಖಂಡದ ಆಯುರ್ವೇದ ಇಲಾಖೆಯು ಕೂಡಾ ಪತಂಜಲಿ ಸಂಸ್ಥೆಯು ನೂತನ ಔಷಧಿ ಕಿಟ್‌ನ ಪರವಾನಿಗೆಗೆ ಅರ್ಜಿ ಸಲ್ಲಿಸುವಾಗ ಅದು ಕೊರೋನ ವೈರಸ್ ಚಿಕಿತ್ಸೆಗೆ ಬಳಸುವ ಉದ್ದೇಶ ಹೊಂದಿದೆಯೆಂದು ಬಹಿರಂಗಪಡಿಸಿರಲಿಲ್ಲ. ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಹಾಗೂ ಕಫ ಮತ್ತು ಜ್ವರವನ್ನು ಗುಣಪಡಿಸು ಔಷಧಿಯೆಂದು ವಿವರಿಸಿ ಪರವಾನಿಗೆಗೆ ಅರ್ಜಿ ಸಲ್ಲಿಸಿತ್ತು ಎಂದು ಉತ್ತರಖಂಡದ ಆಯುರ್ವೇದ ಸಚಿವಾಲಯ ತಿಳಿಸಿದೆ.ಈ ಬಗ್ಗೆ ತಾನು ಪತಂಜಲಿ ಸಂಸ್ಥೆಗೆ ಕಾನೂನು ನೋಟಿಸ್ ಜಾರಿಗೊಳಿಸುವುದಾಗಿ ಅದು ತಿಳಿಸಿದೆ.

ರಾಮ್‌ದೇವ್ ಸಹಿತ ಐವರ ವಿರುದ್ಧ ಎಫ್‌ಐಆರ್

ತಮ್ಮ ಸಂಸ್ಥೆಯ ನೂತನ ಔಷಧಿಗಳು ಕೊರೋನ ವೈರಸ್ ಗುಣಪಡಿಸಬಹುದೆಂದು ಘೋಷಿಸಿಕೊಳ್ಳುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆಂದು ಆರೋಪಿಸಿ ಜೈಪುರ ಪೊಲೀಸರು ಶುಕ್ರವಾರ ರಾಮ್‌ದೇವ್, ಬಾಲಕೃಷ್ಣ ಹಾಗೂ ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News