ಗುವಾಹಟಿ: ಅಖಿಲ್ ಗೊಗೊಯಿ ಬಿಡುಗಡೆಗೆ ಆಗ್ರಹಿಸಿ ಕೈದಿಗಳಿಂದ ನಿರಶನ

Update: 2020-06-30 14:37 GMT

ಹೊಸದಿಲ್ಲಿ,ಜೂ.30: ರೈತ ನಾಯಕ ಅಖಿಲ್ ಗೊಗೊಯಿ ಬಿಡುಗಡೆಗೆ ಆಗ್ರಹಿಸಿ ಅಸ್ಸಾಂ ಗುವಾಹಟಿ ಸೆಂಟ್ರಲ್ ಜೈಲಿನ ಸುಮಾರು 1200 ಮಂದಿ ಕೈದಿಗಳು ನಿರಶನ ನಡೆಸಿದರು. ಅಲ್ಲದೆ ಕೊರೋನ ಸೋಂಕಿನ ಭೀತಿಯ ವಿರುದ್ಧ ತಮಗೆ ರಕ್ಷಣೆ ನೀಡುವಂತೆಯೂ ಕೈದಿಗಳು ಜೈಲಿನ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ಗುವಾಹಟಿ ಜೈಲಿನಿಂದ ಗೊಗೊಯಿ ಅವರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೈದಿಗಳು ಜೂನ್ 25 ಹಾಗೂ 26ರಂದು ನಿರಶನ ನಡೆಸಿದ್ದರೆಂದು ಅಸ್ಸಾಂನ ದಿನಪತ್ರಿಕೆ ಆಮರ್ ಅಸೊಮ್ ವರದಿ ಮಾಡಿದೆ.

 ಕೊರೋನ ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಜೈಲಿಗೆ ಆಗಮಿಸುವ ಹೊಸ ಕೈದಿಗಳನ್ನು ಈಗ ಇರುವ ಕೈದಿಗಳ ಸೆಲ್‌ಗಳಲ್ಲಿ ಇರಿಸುವ ಮೊದಲು ಅವರನ್ನು ಕ್ವಾರಂಟೈನ್‌ಗೊಳಪಡಿಸಬೇಕೆಂದು ಬೇಡಿಕೆಯನ್ನು ಕೂಡಾ ನಿರಶನನಿರತ ಕೈದಿಗಳು ಆಗ್ರಹಿಸಿದ್ದಾರೆ.

ನಿರಶನ ಗಂಭೀರ ರೂಪವನ್ನು ತಾಳುತ್ತಿದ್ದಂತೆಯೇ ಹಲವಾರು ಉನ್ನತ ಜೈಲು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೈದಿಗಳ ಜೊತೆ ಸಂಧಾನ ನಡೆಸಿದರು.

   ‘ ಹೊಸ ಕೈದಿಗಳನ್ನು ಕೋವಿಡ್-19 ತಪಾಸಣೆಗೊಳಪಡಿಸಿಯೇ ಜೈಲಿಗೆ ಕರೆದುಕೊಂಡು ಬರಬೇಕೆಂದು ಕೈದಿಗಳು ಲಿಖಿತರೂಪದ ಮನವಿಯನ್ನು ಸಲ್ಲಿಸಿದ್ದರು. ಆದಾಗ್ಯೂ ಜೈಲು ಅದಿಕಾರಿಗಳು ಅದನ್ನು ಕಡೆಗಣಿಸಿ ಹೊಸ ಕೈದಿಗಳನ್ನು ಕರೆತರುತ್ತಿದ್ದು, ಇದರೊಂದಿಗೆ ಸೆರೆಮನೆಯಲ್ಲಿರುವ 1200ಕ್ಕೂ ಅಧಿಕ ಮಂದಿ ಕೈದಿಗಳನ್ನು ಆರೋಗ್ಯ ಸಂಚಕಾರ ತಂದಿದ್ದಾರೆ. ಇದರಿಂದ ತಮಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಜೂನ್ 25 ಹಾಗೂ 26ರಂದು ಕೈದಿಗಳು ನಿರಶನ ನಡೆಸಿದೆಂದು ‘ಆಮರ್ ಅಸೊಮ್’ ವರದಿ ಮಾಡಿದೆ.

   ಅಸ್ಸಾಂನ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್‌ಎಸ್)ಯ ಸ್ಥಾಪಕರೂ ಆಗಿರುವ ಗೊಗೊಯಿ 200 ದಿನಗಳ ಜೈಲು ವಾಸವನ್ನು ಸೋಮವಾರ ಪೂರ್ಣಗೊಳಿಸಿದ್ದಾರೆ. ಎಂಎಸ್‌ಎಸ್ ಜೊತೆ ನಂಟು ಹೊಂದಿವ ಬಿಟು ಸೊನೊವಾಲ್, ಧೈಜಿಯಾ ಕೊನ್ವಾರ್ ಹಾಗೂ ಮಾನಸ್ ಕೊನ್ವರ್ ಅವರನ್ನು ಕೂಡಾ ಗೊಗೊಯಿ ಜೊತೆ ಬಂಧಿಸಲಾಗಿತ್ತು. ಡಿಸೆಂಬರ್ ತಿಂಗಳ ಆರಂಭದಲ್ಲಿ ಅಸ್ಸಾಂನಲ್ಲಿ ಭುಗಿಲೆದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ಈ ಯುವನಾಯಕರು ವಹಿಸಿದ್ದರು. ಅಸ್ಸಾಂನ ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ಕಟುಟೀಕಾಕಾರರಾದ ಇವರನ್ನು ಮಾವೋವಾದಿಗಳೆಂಬ ಆರೋಪ ಹೊರಿಸಿ ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯಡಿ ಬಂಧಿಸಲಾಗಿತ್ತು

 ಈವರೆಗೆ ರಾಜ್ಯ ಸಭಾ ಸಂಸದ ಅಜಿತ್ ಭೂಯಾನ್ ಸೇರಿದಂತೆ ಹಲವಾರು ಮಂದಿ ಗಣ್ಯ ವ್ಯಕ್ತಿಗಳು ಮುಖ್ಯಮಂತ್ರಿ ಸರ್ಭಾನಂದ ಸೊನೊವಾಲ್ ಅವರನ್ನು ಭೇಟಿಯಾಗಿ ಗೊಗೊಯಿ ಬಿಡುಗಡೆಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News