ಕುಂಕುಮ, ಬಳೆ ನಿರಾಕರಿಸಿದ್ದ ಪತ್ನಿಯಿಂದ ಪತಿಗೆ ವಿಚ್ಛೇದನ ನೀಡಿದ ಹೈಕೋರ್ಟ್

Update: 2020-06-30 16:21 GMT

ಗುವಾಹಟಿ,ಜೂ.30: ವಿವಾಹಿತ ಮಹಿಳೆಯು ಕುಂಕುಮ ಮತ್ತು ಬಳೆಯನ್ನು ಧರಿಸಲು ನಿರಾಕರಿಸುವುದು ಆಕೆ ವಿವಾಹಕ್ಕೆ ಅಸಮ್ಮತಿ ತೋರಿಸಿದಂತಾಗುತ್ತದೆ ಎಂದು ಹೇಳಿರುವ ಗುವಾಹಟಿ ಉಚ್ಚ ನ್ಯಾಯಾಲಯವು ವ್ಯಕ್ತಿಯೋರ್ವನಿಗೆ ಆತನ ಪತ್ನಿಯಿಂದ ವಿಚ್ಛೇದನವನ್ನು ಮಂಜೂರು ಮಾಡಿದೆ.

ಇಂತಹ ಸ್ಥಿತಿಯಲ್ಲಿ ವಿವಾಹ ಬಂಧನವನ್ನು ಮುಂದುವರಿಸುವುದನ್ನು ಪತಿಗೆ ಕಡ್ಡಾಯಗೊಳಿಸಿದರೆ ಆತನಿಗೆ ಮತ್ತು ಆತನ ಕುಟುಂಬಕ್ಕೆ ಕಿರುಕುಳವನ್ನು ನೀಡಿದಂತಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ವಿಚ್ಛೇದನವನ್ನು ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶ ಅಜಯ ಲಾಂಬಾ ಮತ್ತು ನ್ಯಾ.ಸೌಮಿತ್ರ ಸೈಕಿಯಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕುಟುಂಬ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ಪೀಠವು, ಹಿಂದು ಸಂಪ್ರದಾಯಗಳಡಿ ವಿವಾಹಿತ ಮಹಿಳೆಯೋರ್ವಳು ಕುಂಕುಮ ಮತ್ತು ಬಳೆ ಧರಿಸಲು ನಿರಾಕರಿಸುವುದು ಆಕೆ ಅವಿವಾಹಿತಳಂತೆ ಬಿಂಬಿಸಿಕೊಳ್ಳಲು ಬಯಸಿದ್ದಾಳೆ ಅಥವಾ ವೈವಾಹಿಕ ಸಂಬಂಧವನ್ನು ಮುಂದುವರಿಸಲು ಇಷ್ಟಪಡುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ತನ್ನ ಜೂ.19ರ ಆದೇಶದಲ್ಲಿ ಹೇಳಿದೆ.

ಮಹಿಳೆಯು ತನ್ನ ಪತಿಯ ಕುಟುಂಬದೊಂದಿಗೆ ವಾಸವಿರಲು ನಿರಾಕರಿಸಿದ್ದಳು ಮತ್ತು ತನಗೆ ಪ್ರತ್ಯೇಕ ವಸತಿಯನ್ನು ಒದಗಿಸುವಂತೆ ಆತನನ್ನು ಬಲವಂತಗೊಳಿಸಿದ್ದಳು ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿರುವ ನ್ಯಾಯಾಲಯವು,ಇದನ್ನು ಕ್ರೌರ್ಯವೆಂದು ಪರಿಗಣಿಸಬಹುದಾಗಿದೆ ಎಂದು ತಿಳಿಸಿದೆ.

ಕಾನೂನಿನಂತೆ ತನ್ನ ವಯಸ್ಸಾಗಿರುವ ತಾಯಿಯನ್ನು ನೋಡಿಕೊಳ್ಳುವ ತನ್ನ ಪತಿಯ ಶಾಸನಬದ್ಧ ಕರ್ತವ್ಯಕ್ಕೆ ಮಹಿಳೆ ತಡೆಯೊಡ್ಡಿದ್ದಳು ಎಂಬ ಅಂಶವನ್ನು ಕುಟುಂಬ ನ್ಯಾಯಾಲಯವು ಕಡೆಗಣಿಸಿದೆ ಎಂದೂ ಪೀಠವು ಹೇಳಿದೆ.

 ದಂಪತಿ 2012,ಫೆ.17ರಂದು ಮದುವೆಯಾಗಿದ್ದರು. ಆದರೆ ಮಹಿಳೆ ಪತಿಯ ಕುಟುಂಬದೊಂದಿಗೆ ವಾಸವಿರಲು ನಿರಾಕರಿಸಿದ್ದರಿಂದ ಕೆಲ ಸಮಯದಲ್ಲಿಯೇ ಅವರಿಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು.

ಪತಿ ಮತ್ತು ಆತನ ಕುಟುಂಬ ಸದಸ್ಯರು ತನಗೆ ಚಿತ್ರಹಿಂಸೆ ನೀಡಿದ್ದರು ಎಂದು ಆರೋಪಿಸಿ ಮಹಿಳೆಯು ಪೊಲೀಸ್ ದೂರನ್ನು ದಾಖಲಿಸಿದ್ದಳಾದರೂ ಅದು ಸಾಬೀತಾಗಿರಲಿಲ್ಲ ಎನ್ನುವುದನ್ನು ಬೆಟ್ಟುಮಾಡಿರುವ ನ್ಯಾಯಾಲಯವು,ದಂಪತಿಗಳ ನಡುವೆ ಕೌಟುಂಬಿಕ ಸೌಹಾರ್ದ ಸಾಧ್ಯವಿಲ್ಲದಿರುವಾಗ ಇಂತಹ ವಿವಾಹವನ್ನು ಜೀವಂತವಾಗಿಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News