ಮೀನುಗಾರರಿಗೆ ಕ್ಯುಆರ್ ಕೋಡ್ ಆಧಾರ್ ಕಾರ್ಡ್ ಕಡ್ಡಾಯ: ಕರಾವಳಿ ಮೀನುಗಾರಿಕಾ ಸಂವಾದದಲ್ಲಿ ನಿರ್ಣಯ

Update: 2020-06-30 17:06 GMT

ಮಂಗಳೂರು, ಜೂ.30: ಮೀನುಗಾರಿಕೆಯನ್ನು ಮತ್ತಷ್ಟು ಸುರಕ್ಷಿತವಾಗಿಸುವ ದೃಷ್ಟಿಯಿಂದ ಮೀನುಗಾರಿಕೆ ಸಂದರ್ಭ ಮೀನುಗಾರರಿಗೆ ಕ್ಯೂಆರ್ ಕೋಡ್ ಹೊಂದಿದ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಇಂದು ಕರಾವಳಿ ಮೀನುಗಾರಿಕೆ ಕುರಿತು ನಡೆದ ಸಂವಾದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಾಗಿದೆ.

ಮೀನುಗಾರಿಕಾ ದೋಣಿಗಳಲ್ಲಿ ಸಮುದ್ರ, ಕಡಲು ಸೇರಿದಂತೆ ಮೀನುಗಾರಿಕೆ ನಡೆಸುವವರು ಕ್ಯುಆರ್ ಕೋಡ್ ಹೊಂದಿದ ಆಧಾರ್ ಕಾರ್ಡ್ ಹೊಂದಿದ್ದಲ್ಲಿ ಸಮುದ್ರದ ಮೂಲಕ ದೇಶದ ಗಡಿಯನ್ನು ಸಂರಕ್ಷಿಸುವಲ್ಲಿ ಕಾವಲು ಪಡೆಗೆ ಸಹಕಾರಿಯಾಗಲಿದೆ ಎಂದು ಕರಾವಳಿ ಕಾವಲು ಪಡೆಯಟ ಅಧೀಕ್ಷಕ ಚೇನ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯದ ವಿವಿಧ ಕರಾವಳಿ ಜಿಲ್ಲೆಗಳ ಮೀನುಗಾರ ಮುಖಂಡರು, ಶಾಸಕರು ಕೂಡಾ ಈ ಬಗ್ಗೆ ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಇಲಾಖೆಯಿಂದ ಸುತ್ತೋಲೆಯನ್ನು ಹೊರಡಿಸುವುದಾಗಿಯೂ ಹೇಳಿದರು.

ಕ್ಯುಆರ್ ಕೋಡ್ ಹೊಂದಿಲ್ಲದ ಆಧಾರ್ ಕಾರ್ಡ್ ಇರುವ ಮೀನುಗಾರರಿಗೆ ಹೊಸತಾಗಿ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಲು ಇಲಾಖೆ ಹಾಗೂ ಫೆಡರೇಶನ್ ಮೂಲಕ ಜಿಲ್ಲಾ ಮಟ್ಟದಲ್ಲಿ ಸಹಕರಿಸಲು ಕ್ರಮ ಕೈಗೊಳ್ಳುವ ಕುರಿತಂತೆಯೂ ಸಚಿವರು ಸೂಚನೆ ನೀಡಿದರು.

ಸುರಕ್ಷತೆಯ ದೃಷ್ಟಿಯಿಂದ ಮೀನುಗಾರಿಕಾ ದೋಣಿಗಳಲ್ಲಿ ಸ್ವಯಂಚಾಲಿತ ಮಾಹಿತಿ ವ್ಯವಸ್ಥೆ (ಅಟೋಮ್ಯಾಟಿಕ್ ಇನ್‌ಫೋರ್ಮೇಶನ್ ಸಿಸ್ಟಮ್) ಅಳವಡಿಸಿ ಪರವಾನಿಗೆ ಪಡೆದು ಅದನ್ನು ನಿಗದಿತ ಅವಧಿಗೆ ನವೀಕರಣಗೊಳಿಸಬೇಕೆಂದು ತಿಳಿಸಿದ ಕರಾವಳಿ ಕಾವಲು ಪಡೆಯ ಅಧೀಕ್ಷಕ ಚೇತನ್, ಮೀನುಗಾರಿಕಾ ಬಂದರುಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳಡಿಸುವುದು ಅತೀ ಅಗತ್ಯ ಎಂದರು.

ಮೀನುಗಾರ ಮುಖಂಡರಾದ ವಾಸುದೇವ ಎಂಬವರು ಮಾತನಾಡಿ, ಕರಾವಳಿ ಕಾವಲು ಪಡೆಗೆ ರಕ್ಷಣಾ ಕಾರ್ಯಕ್ಕೆ ಸುಸಜ್ಜಿತ ದೋಣಿಗಳನ್ನು ಒದಗಿಸಬೇಕೆಂದು ಸಲಹೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮುಖಂಡರಾದ ಗಣಪತಿ ಮಾಂಡ್ರೆಯವರು ಮಾತನಾಡಿ, ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ಅನುಭವ ಇರುವ ಯುವಕರನ್ನೇ ಕರಾವಳಿ ಕಾವಲು ಪಡೆಗೆ ಶೇ. 50ರಷ್ಟು ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಇತರ ಮೀನುಗಾರರ ಮುಖಂಡರಿಂದಲೂ ಈ ಬಗ್ಗೆ ಪೂರಕ ಸಲಹೆಗಳು ವ್ಯಕ್ತವಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಕಾವಲು ಪಡೆಯಲ್ಲಿ ಶೇ. 25ರಷ್ಟು ಮಂದಿ ಮೀನುಗಾರರನ್ನೇ ಆಯ್ಕೆ ಮಾಡುವಂತೆ ನಿರ್ಣಯ ಕೈಗೊಂಡು ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕೃಷಿಗೆ ಇರುವ ಮಾರ್ಗಸೂಚಿಗಳು ಮೀನುಗಾರರಿಗೂ ಅನ್ವಯವಾಗಬೇಕು ಎಂದು ಸಲಹೆ ನೀಡಿದ ಮೀನುಗಾರರ ಮುಖಂಡರಾದ ಯಶಪಾಲ್ ಸುವರ್ಣ, ಮೀನುಗಾರರಿಗೆ ಒದಗಿಸಲಾಗುವ ಸಬ್ಸಿಡಿಯನ್ನು ನಿಗದಿತ ಅವಧಿಯಲ್ಲಿ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕರಾವಳಿ ಮೀನುಗಾರಿಕೆ ಪ್ರಸ್ತುತ ಸ್ಥಿತಿ ಗತಿ, ಆಳ ಸಮುದ್ರ ಮೀನುಗಾರಿಕೆ, ಕ್ರಮಬದ್ಧವಲ್ಲದ ಮೀನುಗಾರಿಕೆ ಪದ್ಧತಿಗಳ ಬಗ್ಗೆ ಸರಕಾರದ ನಿಲುವು, ಟ್ರಾಲ್ ದೋಣಿಗಳನ್ನು ಪರ್ಸಿನ್ ದೋಣಿಗಳಾಗಿ ಪರಿವರ್ತನೆ, ಕರಾವಳಿ ಸುರಕ್ಷತೆ ಮತ್ತು ಭದ್ರತೆ, ನಾಡದೋಣಿ ಮೀನು ಗಾರಿಕೆ, ಸೀಮೆಎಣ್ಣೆ ಇಂಜಿನ್‌ಗಳನ್ನು ಡೀಸೆಲ್ ಹಾಗೂ ಪೆಟ್ರೋಲ್ ಇಂಜಿನ್‌ಗಳಾಗಿ ಪರಿವರ್ತಿಸುವುದು, ಕರಾವಳಿ ಮೀನುಗಾರಿಕೆ ಅಧಿನಿಯಮ 1986ರ ತಿದ್ದುಪಡಿ, ಹಿನ್ನೀರು ಮೀನು ಕೃಷಿ ಮೊದಲಾದ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಕರಾವಳಿ ಜಿಲ್ಲೆಗಳ ಮೀನುಗಾರರ ಮುಖಂಡರು ವಿವಿಧ ರೀತಿಯ ಸಲಹೆ ಸೂಚನೆಗಳನ್ನು ನೀಡಿದರು. ಮೀನುಗಾರಿಕಾ ಇಲಾಖೆಯ ರಾಜ್ಯ ನಿರ್ದೇಶಕರಾದ ರಾಮಕೃಷ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಲಾಲಾಜಿ ಮೆಂಡನ್, ರೂಪಾಲಿ ನಾಯ್ಕೆ ಉಪಸ್ಥಿತರಿದ್ದರು. ಮೀನುಗಾರಿಕಾ ಜಂಟಿ ನಿರ್ದೇಶಕ ದಿನೇಶ್ ಕುಮಾರ್ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಬೋಟ್‌ಗಳ ಇಂಜಿನ್‌ಗಳು ಭಾರತದಲ್ಲೇ ತಯಾರಾಗಲಿ: ಯಶಪಾಲ್ ಸುವರ್ಣ

ಮೀನುಗಾರಿಕೆ ನಡೆಸುವ ಲಕ್ಷಾಂತರ ರೂ. ಮೌಲ್ಯದ ಯಾಂತ್ರೀಕೃತ ದೋಣಿಗಳ ಇಂಜಿನ್‌ಗಳು ಚೀನಾದಿಂದ ತಯಾರಾಗುತ್ತಿದ್ದು, ಬಿಡಿ ಭಾಗಗಳಿಗೂ ಚೀನಾವನ್ನು ಅವಲಂಬಿಸಬೇಕಾಗಿದೆ. ಹಾಗಾಗಿ ಇಂಜಿನ್ ಹಾಗೂ ಬಿಡಿ ಭಾಗಗಳ ಘಟಕವೊಂದನ್ನು ಭಾರತದಲ್ಲಿಯೇ ಸ್ಥಾಪಿಸುವ ಅಗತ್ಯವಿದೆ ಎಂದು ಮೀನುಗಾರರ ಮುಖಂಡ ಯಶಪಾಲ್ ಸುವರ್ಣ ಸಲಹೆ ನೀಡಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ ಈ ಬಗ್ಗೆ ಸಂಬಂಧಪಟ್ಟ ಕಂಪನಿಗಳ ಜತೆ ಕರಾವಳಿ ಪ್ರಾಧಿಕಾರದ ಹಾಗೂ ಫೆಡರೇಶನ್ ಮುಖಂಡರು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಒಂದು ವರ್ಷದಲ್ಲಿ ಕುಳಾಯಿಯಲ್ಲಿ ಮೀನುಗಾರಿಕಾ ಜೆಟ್ಟಿ

ಮೀನುಗಾರರ ಬಹು ಸಮಯದ ಬೇಡಿಕೆಯಾದ ಮೀನುಗಾರಿಕಾ ಜೆಟ್ಟಿಯನ್ನು ಈಗಾಗಲೇ ನಿಗದಿಪಡಿಸಿರುವ ಕುಳಾಯಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಪೂರ್ತಿಗೊಳಿಸಲಾಗುವುದು ಎಂದು ಸಂಸದ ಳಿನ್ ಕುಮಾರ್ ಕಟೀಲು ಹೇಳಿದರು.

ಮೀನುಗಾರಿಕೆ ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಮೀನುಗಾರಿಕೆ ಸಂಸ್ಕೃತಿ ಹಾಗೂ ಆರಾಧನೆಯ ಭಾಗವೂ ಆಗಿದೆ. ಮೀನುಗಾರಿಕೆ ವ್ಯಾಪಾರೀಕರಣವಾಗಿರುವ ಜತೆಯಲ್ಲೇ ಮೀನುಗಳ ರಕ್ಷಣೆ ಹಾಗೂ ಉತ್ಪಾದನೆ ಹೆಚ್ಚಳ ಕುರಿ ತಂತೆಯೂ ಅಗತ್ಯ ಕ್ರಮಗಳನ್ನು ಅನುಸರಿಸಬೇಕಾಗಿದೆ ಎಂದು ಅವರು ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News