4.5 ಕೋಟಿ ಭಾರತೀಯ ಮಹಿಳೆಯರು ನಾಪತ್ತೆ: ವಿಶ್ವಸಂಸ್ಥೆ

Update: 2020-06-30 17:40 GMT

ವಿಶ್ವಸಂಸ್ಥೆ, ಜೂ.30: ಕಳೆದ 50 ವರ್ಷಗಳಲ್ಲಿ ವಿಶ್ವದಾದ್ಯಂತ 142.6 ಮಿಲಿಯನ್ ಮಹಿಳೆಯರು ಕಾಣೆಯಾಗಿದ್ದು ಇದರಲ್ಲಿ ಭಾರತದ ಮಹಿಳೆಯರ ಸಂಖ್ಯೆ 45.8 ಮಿಲಿಯನ್ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.

ಕಾಣೆಯಾಗುವ ಮಹಿಳೆಯರ ಸಂಖ್ಯೆ ಕಳೆದ 50 ವರ್ಷದಿಂದ ದುಪ್ಪಟ್ಟಿಗಿಂತಲೂ ಹೆಚ್ಚಿದೆ. 1970ರಲ್ಲಿ 61 ಮಿಲಿಯನ್ ಇದ್ದ ಪ್ರಮಾಣ 2020ರ ವೇಳೆಗೆ 142.6 ಮಿಲಿಯನ್‌ಗೆ ತಲುಪಿದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನೈಟೆಡ್ ನೇಶನ್ಸ್ ಪಾಪುಲೇಷನ್ ಫಂಡ್(ಯುಎನ್‌ಎಫ್‌ಪಿಎ) ಮಂಗಳವಾರ ಬಿಡುಗಡೆಗೊಳಿಸಿರುವ ವಿಶ್ವ ಜನಸಂಖ್ಯಾ ಸ್ಥಿತಿಯ ವರದಿಯಲ್ಲಿ ಹೇಳಲಾಗಿದೆ. ಇದರಲ್ಲಿ ಚೀನಾದ ಪ್ರಮಾಣ 72.3 ಮಿಲಿಯನ್ ಆಗಿದ್ದರೆ ಭಾರತದ ಪ್ರಮಾಣ 45.8 ಮಿಲಿಯನ್ ಆಗಿದೆ ಎಂದು ವರದಿ ಹೇಳಿದೆ. ಪ್ರಸವಪೂರ್ವ ಮತ್ತು ಪ್ರಸವದ ಬಳಿಕ ನಡೆಸುವ ಲಿಂಗ ಆಯ್ಕೆಯ ಸಂಚಿತ ಪರಿಣಾಮದಿಂದ ನಿರ್ಧಿಷ್ಟ ಅವಧಿಯಲ್ಲಿ ಜನಸಂಖ್ಯೆಯಿಂದ ಮಹಿಳೆಯರ ಪ್ರಮಾಣ ಕಡಿಮೆಯಾಗುವುದನ್ನು ಮಹಿಳೆಯರು ಕಾಣೆಯಾಗುವುದು ಎಂದು ವಿಶ್ಲೇಷಿಸಲಾಗಿದೆ. 2013ರಿಂದ 2017ರ ಮಧ್ಯೆ ಪ್ರತೀ ವರ್ಷ ಭಾರತದಲ್ಲಿ ಸುಮಾರು 4,60,000 ಬಾಲಕಿಯರು ಹುಟ್ಟುವಾಗಲೇ ಕಾಣೆಯಾಗಿದ್ದಾರೆ. ದೇಶದಲ್ಲಿ ಮಹಿಳೆಯರು ಕಾಣೆಯಾಗುತ್ತಿರುವ ಪ್ರಮಾಣದಲ್ಲಿ ಮೂರನೇ ಎರಡು ಪ್ರಮಾಣ ಪ್ರಸವ ಪೂರ್ವ ಲಿಂಗ ಆಧಾರಿತ ಆಯ್ಕೆಗೆ ಸಂಬಂಧಿಸಿದ್ದರೆ, ಮೂರನೇ ಒಂದಂಶ ಪ್ರಸವದ ಬಳಿಕದ ಹೆಣ್ಣು ಮಕ್ಕಳ ಮರಣಕ್ಕೆ ಸಂಬಂಧಿಸಿದೆ ಎಂದು ವರದಿ ಹೇಳಿದೆ.

ಇತರ ದೇಶಗಳಿಗೆ ಹೋಲಿಸಿದರೆ ಚೀನಾ ಮತ್ತು ಭಾರತದಲ್ಲಿ ಪ್ರತೀ ವರ್ಷ ಮಹಿಳೆಯರು ಕಾಣೆಯಾಗುವ ಪ್ರಮಾಣ ಹೆಚ್ಚಿದೆ. ವಿಶ್ವದಲ್ಲಿ ಪ್ರಸವ ಪೂರ್ವ ಲಿಂಗ ಆಧಾರಿತ ಆಯ್ಕೆಯ ಕಾರಣದಿಂದ ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯ ಸುಮಾರು 95% ಪ್ರಮಾಣ ಭಾರತ ಮತ್ತು ಚೀನಾಕ್ಕೆ ಸಂಬಂಧಿಸಿದೆ (ವಾರ್ಷಿಕ 1.2 ಮಿಲಿಯನ್‌ನಿಂದ 1.5 ಮಿಲಿಯನ್).

 ‘ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್’ ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಹೆಣ್ಣು ಮಕ್ಕಳ ಸಾವಿನ ಅನುಪಾತ ಭಾರತದಲ್ಲಿ ಅಧಿಕವಾಗಿದ್ದು 1000ಕ್ಕೆ 13.5 (1000 ಹೆಣ್ಣುಮಕ್ಕಳಲ್ಲಿ ಸರಾಸರಿ 13.5 ಹೆಣ್ಣುಮಕ್ಕಳು) ಆಗಿದೆ. ಅಲ್ಲದೆ , 5 ವರ್ಷದೊಳಗಿನ ಹೆಣ್ಣುಮಕ್ಕಳು ಸಾಯುತ್ತಿರುವ 9 ಪ್ರಕರಣದಲ್ಲಿ ಒಂದು ಪ್ರಸವದ ಬಳಿಕದ ಲಿಂಗ ಆಯ್ಕೆಯ ಕಾರಣದಿಂದ ಸಂಭವಿಸುತ್ತದೆ ಎಂದು ವರದಿ ತಿಳಿಸಿದೆ.

ಭಾರತ ಮತ್ತು ವಿಯೆಟ್ನಾಮ್‌ನಲ್ಲಿ ಸರಕಾರಗಳು ಹೆಣ್ಣು ಮಕ್ಕಳ ಕುರಿತು ಜನರಲ್ಲಿರುವ ಭಾವನೆಯನ್ನು ಬದಲಾಯಿಸಿ ಪ್ರಸವ ಪೂರ್ವ ಲಿಂಗ ಆಯ್ಕೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ . ಪುತ್ರಿಯರ ಮಹತ್ವದ ಬಗ್ಗೆ ಮತ್ತು ಮಹಿಳೆಯರು ಹೇಗೆ ಸಮಾಜವನ್ನು ಉತ್ತಮಗೊಳಿಸಲು ತಮ್ಮದೇ ಕೊಡುಗೆ ನೀಡಬಹುದು ಎಂಬುದನ್ನು ಜನರಿಗೆ ತಿಳಿಹೇಳುವ ಅಭಿಯಾನಗಳನ್ನು ಸರಕಾರ ಆರಂಭಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News